
ನವದೆಹಲಿ, ಮೇ 26: ಕ್ರಿಕೆಟ್ ರಂಗದ 'ಜಂಟಲ್ ಮನ್' ಖ್ಯಾತಿಯ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶನಿವಾರ ಪ್ರೀತಿಯ ವಿದಾಯ ಹೇಳಿದ್ದಾರೆ. ಈ ಸಂದರ್ಭ ಅವರು ಎಬಿಡಿಯನ್ನು 'ಸಹೋದರ' ಎಂದು ಉಲ್ಲೇಖಿಸಿದ್ದು ವಿಶೇಷ.
ಟ್ವಿಟರ್ ಮೂಲಕ ಎಬಿಡಿಗೆ ಶುಭ ಹಾರೈಸಿರುವ ಕೊಹ್ಲಿ, 'ನನ್ನ ಪ್ರೀತಿಯ ಸಹೋದರನೆ, ನಿನ್ನೆಲ್ಲಾ ಕಾರ್ಯಗಳಿಗೂ ಶುಭಹಾರೈಕೆಗಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಟಿಂಗ್ ವೈಖರಿಯನ್ನೇ ಬದಲಿಸಿದವನು ನೀನು. ನಿನ್ನ ಪಯಣ ಅದ್ಭುತ, ಅವಿಸ್ಮರಣೀಯವಾಗಲಿ. ನಿನಗೂ ನಿನ್ನ ಕುಟುಂಬಕ್ಕೂ ನನ್ನ ತುಂಬು ಮನದ ಶುಭ ಹಾರೈಕೆಗಳು' ಎಂದು ಬರೆದಿದ್ದಾರೆ.
ಈ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಎಬಿ ಡಿವಿಲಿಯರ್ಸ್ ಆರ್ಸಿಬಿಗೆ ಬಲ ತುಂಬಿದ್ದರು. ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡೂ ವಿಭಾಗದಲ್ಲಿ ಎಬಿಡಿ ಆರ್ಸಿಬಿ ತಂಡದ ಪ್ರಮುಖರಾಗಿ ಗಮನ ಸೆಳೆದಿದ್ದರು. ಅದರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಾಬಾದ್-ಬೆಂಗಳೂರು ಪಂದ್ಯದ ವೇಳೆ ಹೈದರಾಬಾದ್ ನ ಅಲೆಕ್ಸ್ ಹೇಲ್ಸ್ ಸಿಕ್ಸ್ ಬೀಸಿದ ಚೆಂಡನ್ನು ಸಿಕ್ಸರ್ ಲೈನ್ ನಲ್ಲಿ ಅದ್ಭುತವಾಗಿ ಕ್ಯಾಚ್ ಮಾಡಿದ್ದ ಎಬಿಡಿ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಎಂದು ಕರೆಸಿಕೊಂಡಿದ್ದರು.
ಆರ್ಸಿಬಿ ತಂಡದಲ್ಲಿ ಕೊಹ್ಲಿ ಹೆಚ್ಚು ಆತ್ಮೀಯರಾಗಿದ್ದ ಆಟಗಾರರಲ್ಲಿ ಎಬಿಡಿ ಮೊದಲಿಗರು ಎನ್ನುವಷ್ಟರ ಮಟ್ಟಿಗೆ ಕೊಹ್ಲಿ-ಎಬಿಡಿ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಇದೀಗ ಡಿವಿಲಿಯರ್ಸ್ ಅನ್ನು ಸಹೋದರ ಎಂದು ಕರೆಯುವ ಮೂಲಕ ಆತ್ಮೀಯ ಸ್ನೇಹಿತನಿಗೆ ಕೊಹ್ಲಿ ಅವಿನಾಭಾವ ಸಂಬಂಧ ಬೆಸೆದಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಗೆ ಹೆಸರಾದ ಸೌತಾಫ್ರಿಕಾ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಬುಧವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳಿಗೆ ಅಘಾತ ಮೂಡಿಸಿದ್ದರು. ಎಬಿಡಿಯನ್ನು ಹಚ್ಚಿಕೊಂಡಿದ್ದ ಕೊಹ್ಲಿಯೂ ನಿವೃತ್ತಿ ಸಂಗತಿಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಪ್ರೀತಿಯ ಗೆಳೆಯನಿಗೆ ಕೊಹ್ಲಿ ವಿಶೇಷ ರೀತಿಯಲ್ಲಿ ಭಾವಪೂರ್ಣ ವಿದಾಯ ಹೇಳಿದ್ದಾರೆ.