ವಿಜಯ್ ಹಜಾರೆ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಿದ್ದಾರೆ. ಮಾಜಿ ನಾಯಕರಾದ ವಿರಾಟ್ ಕೊಹ್ಲಿ 15 ವರ್ಷಗಳ ಬಳಿಕ ವಿಜಯ್ ಹಜಾರೆ ಆಡುತ್ತಿದ್ದಾರೆ. ಸ್ಫೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಹ ದೇಶೀಯ ಏಕದಿನ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಆಟಗಾರರು ತಾವಾಡಿದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ನಡೆದ ಪಂದ್ಯದಲ್ಲಿ ಆಂಧ್ರ ವಿರುದ್ಧ ದೆಹಲಿ ಮೈದಾನ ಪ್ರವೇಶಿಸಿತು. ಈ ವೇಳೆ ಆಂಧ್ರಾ ನೀಡಿದ್ದ 299 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು 8 ವಿಕೆಟ್ ಕಳೆದುಕೊಂಡು ದೆಹಲಿ ಮುಟ್ಟಿತು. ಈ ವೇಳೆ ಅನುಭವಿ ವಿರಾಟ್ ಕೊಹ್ಲಿ ಆರ್ಭಟಿಸಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತೋರಿಸಿದ್ದ ಅಮೋಘ ಫಾರ್ಮ್‌ನ್ನು ಇವರು ದೇಶೀಯ ಟೂರ್ನಿಯಲ್ಲೂ ಮುಂದುವರೆಸಿದರು. ಇವರು 101 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ 131 ರನ್ ಸಿಡಿಸಿ ಅಬ್ಬರಿಸಿದರು.

ವಿರಾಟ್ ಕೊಹ್ಲಿ ಈ ಅಮೋಘ ಇನಿಂಗ್ಸ್ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿದರು. ವಿರಾಟ್ ಲೀಸ್ಟ್ 'ಎ' ಕ್ರಿಕೆಟ್‌ನಲ್ಲಿ ವೇಗವಾಗಿ 16 ಸಾವಿರ ರನ್ ಕಲೆ ಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಈ ಸಾಧನೆಯನ್ನು 330 ಇನಿಂಗ್ಸ್‌ಗಳಲ್ಲಿ ಮಾಡಿ ಬೀಗಿದ್ದಾರೆ. ಲೀಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಕೀರ್ತಿ ಸದ್ಯ ತೆಂಡೂಲ್ಕರ್ ಹೆಸರಿನಲ್ಲಿದೆ. ಇವರು ಆಡಿದ 551 ಲೀಸ್ಟ್ 'ಎ' ಪಂದ್ಯಗಳಲ್ಲಿ 21,999 ರನ್ ಸಿಡಿಸಿದ್ದಾರೆ. ಇದರಲ್ಲಿ ಏಕದಿನ ಕ್ರಿಕೆಟ್‌ನ 452 ಇನಿಂಗ್ಸ್‌ಗಳಲ್ಲಿ ಬಾರಿಸಿದ 18,426 ಸಹ ಸೇರಿವೆ.
ವಿಜಯ್ ಹಜಾರೆ ಟೂರ್ನಿಯ 'ಸಿ' ಗುಂಪಿನ ಪಂದ್ಯದಲ್ಲಿ ಮುಂಬೈ ಹಾಗೂ ಸಿಕ್ಕಿಂ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಕ್ಕಿಂ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 236 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 30.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 237 ರನ್ ಕಲೆ ಹಾಕಿ ಬೀಗಿತು. ಈ ವೇಳೆ ರೋಹಿತ್ ಶರ್ಮಾ ಶತಕ ಬಾರಿಸಿ ಅಬ್ಬರಿಸಿದರು.

ರೋಹಿತ್ ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿ 94 ಎಸೆತಗಳಲ್ಲಿ 18 ಬೌಂಡರಿ, 9 ಸಿಕ್ಸರ್ ಸಹಾಯದಿಂದ 155 ರನ್ ಸಿಡಿಸಿ ಬೀಗಿದರು. ಈ ಮೂಲಕ ಲೀಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 150ಕ್ಕೂ ಹೆಚ್ಚು ರನ್ ಬಾರಿಸಿದ ಡೇವಿಡ್ ವಾರ್ನರ್ ದಾಖಲೆಯ ಸಮಕ್ಕೆ ನಿಂತರು. ಮೊದಲ ಪಂದ್ಯದಲ್ಲಿ ರೋಹಿತ್ ಮೂರಂಕಿ ಮುಟ್ಟುತ್ತಲೇ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಬಾರಿಸಿದ ಹಿರಿಯ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಇವರು 38 ವರ್ಷ 238 ದಿನಗಳಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ರೋಹಿತ್ 2023-24 ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಳ ತಂಡದ ಅನುಸ್ತುಪ್ ಮಜುಂದಾರ್ ದಾಖಲೆಯನ್ನು ಅಳಿಸಿ ಹಾಕಿದರು.