ಜಿಂಬಾಬ್ವೆ ವಿರುದ್ಧ ಕೊಹ್ಲಿ ಶತಕ ಬಾರಿಸುತ್ತಾರೆ, ಆದರೆ ಉಪಯೋಗವಿಲ್ಲ: ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ!

ಪ್ರಸ್ತುತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿದ್ದು, ಕೆರಿಬಿಯನ್ನರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಿ ವೆಸ್ಟ್ ಇಂಡೀಸ್ ವಿರುದ್ಧ ವೈಟ್‌ವಾಷ್ ಜಯ ಸಾಧಿಸಿದ ಟೀಮ್ ಇಂಡಿಯಾ ಇದೀಗ ರೋಹಿತ್ ಶರ್ಮ ನಾಯಕತ್ವದಡಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡ ಗೆದ್ದು ಪ್ರವಾಸ ಅಂತ್ಯಗೊಳಿಸುವತ್ತ ಚಿತ್ತ ನೆಟ್ಟಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದಲೂ ಸಹ ವಿಶ್ರಾಂತಿಗಾಗಿ ಹೊರಗುಳಿದಿದ್ದಾರೆ. ಇದಕ್ಕೂ ಮುನ್ನ ನಡೆದಿದ್ದ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ್ದ ಎಲ್ಲಾ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಸದ್ಯ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಅತಿ ಕಠಿಣವಾದ ದಿನಗಳನ್ನು ಎದುರಿಸುತ್ತಿದ್ದಾರೆ.
ಶತಕ ಬಾರಿಸಿ ಸುಮಾರು ಎರಡೂವರೆ ವರ್ಷಗಳನ್ನೇ ಕಳೆದಿರುವ ವಿರಾಟ್ ಕೊಹ್ಲಿ ತಮ್ಮ ಮುಂದಿನ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬ ಪ್ರಶ್ನೆ ದೊಡ್ಡಮಟ್ಟದಲ್ಲಿ ಮೂಡಿದೆ. ಇತ್ತೀಚೆಗೆ ಕಣಕ್ಕಿಳಿದ ಬಹುತೇಕ ಎಲ್ಲಾ ಪಂದ್ಯಗಳಲ್ಲಿಯೂ ಫ್ಲಾಪ್ ಆಗಿ ಅರ್ಧಶತಕ ಬಾರಿಸಲು ಕೂಡಾ ಪರದಾಡುತ್ತಿರುವ ವಿರಾಟ್ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಬಹುತೇಕ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು. ಅತ್ತ ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲಿದೆ ಎಂಬ ಸುದ್ದಿಯಿದೆ. ಹಾಗೂ ಇದು ವಿರಾಟ್ ಕೊಹ್ಲಿ ಮರಳಿ ಫಾರ್ಮ್ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿರುವಾಗಲೇ ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಜಿಂಬಾಬ್ವೆ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಬಾರಿಸುವ ಶತಕ ಹೆಚ್ಚೇನೂ ಬದಲಾವಣೆ ತರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಜಿಂಬಾಬ್ವೆ ಪ್ರವಾಸದ ಶತಕ ಹೆಚ್ಚು ಬದಲಾವಣೆ ತರುವುದಿಲ್ಲ
ವಿರಾಟ್ ಕೊಹ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ ಎಂಬುದರ ಕುರಿತು ಮಾತನಾಡಿರುವ ಸ್ಕಾಟ್ ಸ್ಟೈರಿಸ್ ವಿರಾಟ್ ಕೊಹ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಶತಕವನ್ನು ಬಾರಿಸಬಹುದು, ಈ ಶತಕ ಅವರಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು, ಆದರೆ ಇದು ವಿರಾಟ್ ಕೊಹ್ಲಿ ಆಟದಲ್ಲಿ ಹೆಚ್ಚೇನೂ ಬದಲಾವಣೆ ತರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಕೊಹ್ಲಿ ವಿಶ್ರಾಂತಿ ಪಡೆದು ಮರಳಬೇಕು
ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಮಂಕಾಗಿರುವ ವಿರಾಟ್ ಕೊಹ್ಲಿ ತನಗೆ ಅಗತ್ಯವಾದ ವಿಶ್ರಾಂತಿಯನ್ನು ಸಂಪೂರ್ಣವಾಗಿ ಪಡೆದು ನಂತರ ತಂಡಕ್ಕೆ ಮರಳಬೇಕು ಎಂದು ಸ್ಕಾಟ್ ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಟೀಮ್ ಇಂಡಿಯಾದ ಮುಂದಿನ ಪಂದ್ಯಗಳಲ್ಲಿ ಹಾಗೂ ಟೂರ್ನಿಗಳಲ್ಲಿ ತಂಡಕ್ಕೆ ಅತ್ಯಗತ್ಯವಾಗಿ ಬೇಕಾದ ಪ್ರಮುಖ ಆಟಗಾರನಾಗಿದ್ದು, ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐನ ಆಯ್ಕೆಗಾರರಿಗೆ ಕೂಡ ನಾನು ಇದೇ ಮಾತನ್ನು ಹೇಳಲು ಇಚ್ಛಿಸುತ್ತೇನೆ ಎಂದು ಸಹ ಸ್ಕಾಟ್ ಸ್ಟೈರಿಸ್ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ಒಳ್ಳೆಯ ಅಭ್ಯಾಸ ನಡೆಸಲಿ
ಜಿಂಬಾಬ್ವೆ ಪ್ರವಾಸದಿಂದ ವಿರಾಟ್ ಕೊಹ್ಲಿ ಆಟದಲ್ಲಿ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ ಎಂದಿರುವ ಸ್ಕಾಟ್ ಸ್ಟೈರಿಸ್ ಇದರ ಬದಲಾಗಿ ಒಳ್ಳೆಯ ವಿಶ್ರಾಂತಿ ಪಡೆದು ಅಭ್ಯಾಸ ನಡೆಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಟಿ ಟ್ವೆಂಟಿ ವಿಶ್ವಕಪ್ ನಡೆಯಲಿದ್ದು, ತಂಡದ ಪ್ರಮುಖ ಆಟಗಾರನಾಗಿರುವ ಕೊಹ್ಲಿಗೆ ಇನ್ನೂ ಸಾಕಷ್ಟು ಸಮಯವಿದೆ, ಅಷ್ಟರಲ್ಲಿ ಕೊಹ್ಲಿ ಟೂರ್ನಿಗೆ ಬೇಕಾದ ಅಭ್ಯಾಸಗಳನ್ನು ನಡೆಸಿಕೊಂಡು ತಂಡಕ್ಕೆ ಮರಳಲಿ ಎಂದು ಸ್ಕಾಟ್ ಸ್ಟೈರಿಸ್ ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications