ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸಾಧನೆಗೆ ಕೊಹ್ಲಿ ಕೊಡುಗೆ ಅಪಾರ : ಟೆಸ್ಟ್ ನಾಯಕನಾಗಿ ರೋಹಿತ್ ಮೊದಲ ಮಾತು

ಭಾರತ ಹಾಗೂ ಶ್ರಿಲಂಕಾ ನಡುವಿನ ಟೆಸ್ಟ್ ಸರಣಿ ನಾಳೆ(ಶುಕ್ರವಾರ)ಯಿಂದ ಆರಂಭವಾಗಲಿದೆ. ಈ ಪಂದ್ಯ ಎರಡಯ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸಿದೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡುತ್ತಿರುವ 100ನೇ ಟೆಸ್ಟ್ ಪಂದ್ಯ ಇದಾಗಿದ್ದು ಸಾಕಷ್ಟು ನಿರೀಕ್ಷೆಗಳು ಈ ಪಂದ್ಯದ ಮೇಲಿದೆ. ಮತ್ತೊಂದೆಡೆ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ಮೂರು ಮಾದರಿಯಲ್ಲಿಯೂ ಭಾರತದ ನಾಯಕನಾಗಿ ನೇಮಕಗೊಂಡಿದ್ದಾರೆ.
ಇನ್ನು ಈ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನಾದಿನ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಟೆಸ್ಟ್ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ರೋಹಿತ್ ಶರ್ಮಾ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಆರಂಭಿಕ ಸ್ಥಾನ, ಅಜಿಂಕ್ಯ ರಹಾನೆ ಹಾಗೂ ಪೂಜಾರ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬ ಬಗ್ಗೆಯೂ ರೋಹಿತ್ ಮುಂದೆ ಪ್ರಶ್ನೆಗಳು ಎದುರಾದವು. ಇದಕ್ಕೆ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿ 100ನೇ ಪಂದ್ಯದ ಬಗ್ಗೆ: ನಾಯಕನಾಗಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. "ಇದೊಂದು ಅಮೋಘವಾದ ಪ್ರಯಾಣವಾಗಿದೆ. ಈ ಮಾದರಿಯಲ್ಲಿ ಕೊಹ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಆತನ ಆಟವನ್ನು ನೋಡಲು ಬಹಳ ಖುಷಿ ನೀಡುತ್ತದೆ. ಆತನ ಪಾಲಿಗೆ ಈ ಪ್ರಯಾಣ ಬಹಳ ಕಠಿಣವೂ ಆಗಿತ್ತು. ಖಂಡಿತಾ ಈ ವಿಶೇಷ ಮೈಲುಗಲ್ಲಿನ ಪಂದ್ಯವನ್ನು ಆತನಿಗೆ ವಿಶೇಷವಾಗಿಸಲಿದ್ದೇವೆ. ಈ ಐದು ದಿನಗಳನ್ನು ಆತ ಚೆನ್ನಾಗಿ ಆನಂದಿಸಲಿ. ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂದು ಇಷ್ಟು ಉತ್ತಮ ಸ್ಥಿತಿಯಲ್ಲಿದ್ದರೆ ಅದರಲ್ಲಿ ವಿರಾಟ್ ಕೊಹ್ಲಿ ಕೊಡುಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ" ಎಂದು ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಾಯಕನಾಗಿ ರೋಹಿತ್‌ಗೆ ಮೊದಲ ಪಂದ್ಯ: ಇನ್ನು ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ತಮ್ಮ ಯೋಜನೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ. "ಪ್ರಮಾಣಿಕವಾಗಿ ಹೇಳಬೇಕೆಂದಿದ್ದರೆ ನಾನು ಪಂದ್ಯವನ್ನು ಗೆಲ್ಲುವತ್ತ ಹೆಚ್ಚಿನ ಗಮನನೀಡುತ್ತೇನೆ. ಸರಿಯಾದ ಆಟಗಾರರೊಂದಿಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇನೆ. ನಾವು ಟೆಸ್ಟ್ ತಮಡವಾಗಿ ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದೇವೆ. ಅದರ ಎಲ್ಲಾ ಶ್ರೇಯಸ್ಸು ಕುಡ ವಿರಾಟ್ ಕೊಹ್ಲಿಗೆ ಸಲ್ಲಬೇಕಿದೆ. ನಾನು ಅದನ್ನು ಮುಂದುವರಿಸಲು ಇಷ್ಟಪಡುತ್ತೇನೆ. ತಂಡವಾಗಿ ನಾನು ಬೆಳವಣಿಗೆ ಸಾಧಿಸಬೇಕಿದ್ದು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು" ಎಂದಿದ್ದಾರೆ ರೋಹಿತ್ ಶರ್ಮಾ.
ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ? : ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರವಾಗಿ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ನಾಯಕ ರೋಹಿತ್ ಶರ್ಮಾಗೆ ಎದುರಾಯಿತು. "ಯಾರು ಆರಂಭಿಸಬೇಕು ಎಂಬ ಬಗ್ಗೆ ನನ್ನಲ್ಲಿ ನಿರ್ದಿಷ್ಟ ಉತ್ತರವಿಲ್ಲ. ಪಂದ್ಯಕ್ಕೂ ಮುನ್ನ ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಎಲ್ಲರೂ ಕೂಡ ದೀರ್ಘ ಕಾಲ ಆಡುವ ಸಾಮರ್ಥ್ಯವನ್ನು ಹೊಂದಿದ್ದು ಅವರಿಗೆ ಬೆಂಬಲವನ್ನು ನಾವು ನೀಡಬೇಕಿದೆ. ವಿಹಾರಿ, ಮಯಾಂಕ್, ಶುಬ್ಮನ್ ಮತ್ತು ಶ್ರೇಯಸ್ ಐಯ್ಯರ್‌ಗೆ ನಮ್ಮೆಲ್ಲರಿಂದ ಉತ್ತಮ ಬೆಂಬಲ ದೊರೆಯಲಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
3 ಮತ್ತು 5ನೇ ಕ್ರಮಾಂಕದ ಬಗ್ಗೆಯೂ ತುಟಿಬಿಚ್ಚದ ಶರ್ಮಾ: ಇನ್ನು ಈ ಟೆಸ್ಟ್ ಸರಣಿಯಲ್ಲಿ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ತಂಡದಿಂದ ಹೊರಗೆ ಬಿದ್ದಿದ್ದಾರೆ. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಹಾಗೂ ಐದನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಪ್ರಶ್ನೆಗೂ ರೋಹಿತ್ ಶರ್ಮಾ ಸ್ಪಷ್ಟತೆ ನೀಡಲು ಮುಂದಾಗಲಿಲ್ಲ. "ಮೂರನೇ ಹಾಗೂ ಐದನೇ ಕ್ರಮಾಂಕದಲ್ಲಿ ಕುಡ ಯಾರು ಆಡಲಿದ್ದಾರೆ ಎಂಬುದು ಕೂಡ ನನಗೆ ತಿಳಿದಿಲ್ಲ. ಅದಕ್ಕಾಗಿ ನಾಳೆ ಬೆಳಗ್ಗಿನವರೆಗೆ ಕಾಯಲೇಬೇಕಿದೆ. ಯಾರು ಆಡುವ ಅವಕಾಶವನ್ನು ಒಡೆದುಕೊಂಡರೂ ಅವರಿಗೆ ದೊಡ್ಡ ಆಟಗಾರನ ಸ್ಥಾನವನ್ನು ತುಂಬುವ ಜವಾಬ್ಧಾರಿಯಿದೆ. ಎಲ್ಲಾ ವಿದೇಶಿ ಟೆಸ್ಟ್ ಗೆಲುವಿಗಳಲ್ಲಿಯೂ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಅದ್ಭುತ ಕೊಡುಗೆ ನೀಡಿದ್ದಾರೆ. ಆದರೆ ಅವರು ಇನ್ನು ಕೂಡ ಮುಂದಿನ ಟೆಸ್ಟ್ ಪಂದ್ಯಗಳಿಗೆ ಪರಿಗಣನೆಯಲ್ಲಿ ಇದ್ದಾರೆ" ಎಂದು ರೋಹಿತ್ ಶರ್ಮಾ ಪ್ರತಿಕ್ರಿಯೆ ನಿಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications