
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಕ್ರಿಕೆಟ್ ಬ್ಯಾಟಿಂಗ್ ಪಟ್ಟಿಯಲ್ಲಿ ಎಲ್ಲದರಲ್ಲೂ ಉನ್ನತ ಸ್ಥಾನದಲ್ಲಿ ಇಲ್ಲದಿರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಮೇಲುಗೈ ಸಾಧಿಸಿದ್ದಾರೆ. ಭಾರತೀಯ ಕ್ರೀಡಾಪಟುಗಳ ಪೈಕಿ ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚು ಟ್ವಿಟ್ಟರ್‌ನಲ್ಲಿ ಚರ್ಚೆಯಾದ ಆಟಗಾರ ಎನಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಧೋನಿ ಎರಡನೇ ಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ರೆಸ್ಲರ್ ಗೀತಾ ಪೊಗಟ್, ಬ್ಯಾಡ್ಮಿಂಟನ್ ತಾರೆಯರಾದ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮಹಿಳಾ ಕ್ರೀಡಾಪಟಿಗಳ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿದ್ದಾರೆ.
ಪಿತೃತ್ವದ ರಜೆಯನ್ನು ಪಡೆದು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ ಬಳಿಕ ತವರಿಗೆ ಮರಳುವ ಹೊರತಾಗಿಯೂ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿರುವುದರಲ್ಲಿ ಆಶ್ಚರ್ಯ ಪಡುವಂತದ್ದೇನಿಲ್ಲ.
ಟೀಮ್ ಇಂಡಿಯಾ ಮಾಜಿ ನಾಯಕ ಕ್ರಿಕೆಟ್ ಚಟುವಟಿಕೆಗಳಿಂದ ದೀರ್ಘಕಾಲ ದೂರ ಉಳಿದ ಬಳಿಕ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಮೂಲಕ ಆಘಾತವನ್ನು ನೀಡಿದ್ದರು. ಅದಾದ ಬಳಿಕ ಐಪಿಎಲ್‌ನಲ್ಲೂ ಧೋನಿ ಟ್ವಟ್ಟರ್‌ನಲ್ಲಿ ಕೇಂದ್ರ ಬಿಂದುವಾಗಿದ್ದರು.
ಮತ್ತೊಂದೆಡೆ ಧೋನಿಯ ನಿವೃತ್ತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರಕ್ಕೆ ಧೋನಿಯ ಪ್ರತಿಕ್ರಿಯೆ ಅತ್ಯಂತ ಹೆಚ್ಚು ರೀಟ್ವೀಟ್ ಆದ ಟ್ವೀಟ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅನುಷ್ಕಾ ಶರ್ಮಾ ತಾಯಿಯಾಗುತ್ತಿರುವ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಕೊಹ್ಲಿ ಹಂಚಿಕೊಂಡಿರುವ ಟ್ವೀಟ್ ಅತ್ಯಂತ ಹೆಚ್ಚು ಲೈಕ್ ಪಡೆದುಕೊಂಡ ಕ್ರೀಡಾತಾರೆಯ ಪೋಸ್ಟ್ ಎನಿಸಿಕೊಂಡಿದೆ.