ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ಮುಗಿದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ತಂಡದ ಗೆಲುವಿನಲ್ಲಿ ಹಿರಿಯ ಆಲ್‌ರೌಂಡರ್‌ಗಳು ಮಿಂಚಿದ್ದಾರೆ. ಸ್ಟಾರ್ ಬ್ಯಾಟರ್‌ಗಳ ಬ್ಯಾಟ್ ಕೊಂಚ ಮೌನಕ್ಕೆ ಶರಣಾಗಿದೆ. ಆದರೂ, ವಿರಾಟ್ ಕೊಹ್ಲಿ ಮಾತ್ರ ಮೊದಲ ಟೆಸ್ಟ್‌ನಲ್ಲೂ ದಾಖಲೆಯನ್ನು ಬರೆದಿದ್ದರು. ಈಗ ಎರಡನೇ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ಬರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಟೀಮ್ ಇಂಡಿಯಾ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಚೆನ್ನೈ ಟೆಸ್ಟ್ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 23 ರನ್ ಬಾರಿಸಿದ್ದ ವಿರಾಟ್ ಇತಿಹಾಸ ಸೃಷ್ಟಿಸಿದ್ದರು. ತವರಿನಲ್ಲಿ ವಿರಾಟ್ 12 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ ದಾಖಲೆ ತಮ್ಮದಾಗಿಸಿಕೊಂಡರು. ಸಚಿನ್ ಬಳಿಕ ಈ ದಾಖಲೆಯನ್ನು ನಿರ್ಮಿಸಿದ ಆಟಗಾರ ಎಂಬ ಶ್ರೇಯ್ ವಿರಾಟ್ ಅವರದ್ದಾಯಿತು.

ಮೊದಲ ಟೆಸ್ಟ್‌ನಲ್ಲಿ ಮಾಡಲು ಆಗದ ಸಾಧನೆಯನ್ನು ವಿರಾಟ್ ಕೊಹ್ಲಿ, ಎರಡನೇ ಟೆಸ್ಟ್‌ನಲ್ಲಿ ಮಾಡುವ ಇರಾದೆಯನ್ನು ಹೊಂದಿದ್ದಾರೆ. ಇವರು ಕಾನ್ಪುರ್ ಟೆಸ್ಟ್‌ನಲ್ಲಿ ಬಿಗ್ ಇನಿಂಗ್ಸ್ ಕಟ್ಟಿದರೆ, ಹಲವು ದಾಖಲೆಗಳನ್ನು ನಿರ್ಮಿಸಹುದು. ಎರಡನೇ ಟೆಸ್ಟ್ ವಿರಾಟ್ ಬರೆಯಲಿರುವ ದಾಖಲೆಗಳ ಪಟ್ಟಿ ಇಲ್ಲಿದೆ.
- ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ 129 ರನ್‌ಗಳ ಬಾರಿಸುವಲ್ಲಿ ಸಫಲರಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಕಲೆ ಹಾಕಿದ ಸಾಧನೆ ಮಾಡಲಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿರುವ ನಾಲ್ಕನೇ ಆಟಗಾರ ಎಂಬ ಹಿರಿಮೆಗೆ ವಿರಾಟ್ ಪಾತ್ರರಾಗಲಿದ್ದಾರೆ. ಈ ಮೊದಲು ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.
- ಎರಡನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ದೊಡ್ಡ ದಾಖಲೆಗಳನ್ನು ಮುರಿಯುವ ಸನಿಹದಲ್ಲಿ ನಿಂತಿದ್ದಾರೆ. ಗ್ರೀನ್ ಪಾರ್ಕ್ ಅಂಗಳದಲ್ಲಿ 35 ರನ್ ಸಿಡಿಸಿದರೆ, ಅವರು ಈ ದೊಡ್ಡ ಸಾಧನೆ ಮಾಡಬಹುದು. ಈ ದಾಖಲೆಯಿಂದ ಅವರು ಕೇವಲ 35 ರನ್‌ಗಳ ಅಂತರದಲ್ಲಿದ್ದಾರೆ.

- ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟಿಗನೊಬ್ಬ 600ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27 ಸಾವಿರ ರನ್‌ಗಳ ಗಡಿ ದಾಟಿದ್ದು ಇದೇ ಮೊದಲು. ಸಚಿನ್ ತೆಂಡೂಲ್ಕರ್ 623 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
- ಕಾನ್ಪುರ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಶತಕ ಬಾರಿಸುವಲ್ಲಿ ಯಶಸ್ವಿಯಾದರೆ, ಡಾನ್ ಬ್ರಾಡ್ಮನ್ ದಾಖಲೆಯನ್ನು ಅಳಿಸಿ ಹಾಕಬಲ್ಲರು. ಡಾನ್ ಬ್ರಾಡ್ಮನ್ ಟೆಸ್ಟ್‌ನಲ್ಲಿ 29 ಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಈಗ ವಿರಾಟ್ ಈ ದಾಖಲೆಯನ್ನು ಮೀರಿ ನಿಲ್ಲಲು ಇನ್ನು ಒಂದು ಶತಕದ ಅವಶ್ಯಕತೆ ಇದೆ.