ಹೊಸ ವರ್ಷ, ಹೊಸ ಸವಾಲಿಗೆ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ವಡೋದರಾದಲ್ಲಿ ವಿರಾಟ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 2023 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬಳಿಕ ಇದೇ ಮೊದಲ ಬಾರಿಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಕಠಿಣ ತಾಲೀಮು ನಡೆಸುತ್ತಿರುವ ಮೂರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೊದಲನೆಯದ್ದು ವಿರಾಟ್ ನೆಟ್ಸ್‌ನಲ್ಲಿ ಬ್ಯಾಟ್ ಮಾಡುತ್ತಿರುವುದು ಕಂಡು ಬಂದರೆ, ಎರಡನೇ ಫೋಟೋದಲ್ಲಿ ವಿರಾಟ್ ತಂಡದ ಆಟಗಾರರೊಂದಿಗೆ ಬೆವರು ಹರಿಸುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಮೂರನೇ ಫೋಟೋದಲ್ಲಿ ವಿರಾಟ್ ತಮ್ಮ ಕಿಟ್ ಬ್ಯಾಗಿನೊಂದಿಗೆ ತೆರಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೊಸ ವರ್ಷದ ಆರಂಭದಲ್ಲಿ ಕೊಹ್ಲಿ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಸರಣಿಗಳ ಮುಂಚಿತವಾಗಿ ವಿರಾಟ್ ಕೊಹ್ಲಿ ಅವರ ತಯಾರಿಯನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಅಭ್ಯಾಸದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರಲಿಲ್ಲ.
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಾಹೀರಾತು, ಪತ್ನಿ ಅನುಷ್ಕಾ ಜೊತೆಗಿನ ರಜಾ ದಿನಗಳು, ಮತ್ತು ವಿಶೇಷ ಮೈಲಿಗಲ್ಲನ್ನು ಗುರುತಿಸಿರುವ ಸಂದೇಶಗಳನ್ನು ವಿರಾಟ್ ಹಾಕುತ್ತಲೇ ಇದ್ದರು. ಇದರಲ್ಲಿ ಟಿ20 ವಿಶ್ವಕಪ್ 2024ರಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ ಫೋಟೋಗಳನ್ನು, 2025 ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕಪ್‌ಗೆ ಮುತ್ತಿಟ್ಟಿದ್ದು, ಆರ್‌ಸಿಬಿ ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದ ಫೋಟೋ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ಒಂದು ಕಾಲದಲ್ಲಿ ಸಾಮಾಜಿಕ ತಾಣದಲ್ಲಿ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಇದರಿಂದ ದೂರ ಸರಿದಿದ್ದಾರೆ. ಇವರ ಈ ನಡೆಗೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ವಿರಾಟ್ ಕೊಹ್ಲಿ ಅವರ ಇತ್ತೀಚಿನ ಪೋಸ್ಟ್‌ಗಳು ಆಯ್ದ ಕೆಲವು ವಿಷಯಗಳಿಗೆ ಸೀಮಿತವಾಗಿತ್ತು. ಆದರೆ ಈಗ ವಿರಾಟ್ ಕೊಹ್ಲಿ ಬಹು ವರ್ಷಗಳ ಬಳಿಕ ಸಾಮಾಜಿಕ ತಾಣದಲ್ಲಿ ಅಭ್ಯಾಸದ ಪೋಸ್ಟ್ ಹಾಕಿ ಗಮನ ಸೆಳೆದಿದ್ದಾರೆ.
ದಶಕದ ಬಳಿಕ ದೇಶೀಯ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ವಿರಾಟ್ ಕೊಹ್ಲಿ, ಹೊಸ ವರ್ಷವನ್ನು ದುಬೈನಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಸ್ನೆಹಿತರೊಂದಿಗೆ ಆಚರಿಸಿಕೊಂಡರು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಆಡಲು ಇವರು ವಡೋದರಾಗೆ ಆಗಮಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಇವರನ್ನು ನೋಡಲು ಮುಗಿ ಬಿದ್ದರು.
ವಿರಾಟ್ ಕೊಹ್ಲಿ ಸದ್ಯ ಭಾರತ ತಂಡದ ಪರ ಏಕದಿನ ಸರಣಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಅವರ ಫಾರ್ಮ್ ಕಂಡು ಅಭಿಮಾನಿಗಳು ಟಿಕೆಟ್ ಖರೀದಿಸಲು ಮುಗಿ ಬಿದಿದ್ದಾರೆ. ಸಂಡೆಯ ಮಜಾವನ್ನು ವಿರಾಟ್ ಹೆಚ್ಚಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ವಿರಾಟ್ ಕೊಹ್ಲಿ ಕಳೆದ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 74 ರನ್, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಹಾಗೂ ಎರಡನೇ ಪಂದ್ಯದಲ್ಲಿ ಶತಕ, ಮೂರನೇ ಪಂದ್ಯದಲ್ಲಿ 65 ರನ್ ಬಾರಿಸಿದ್ದಾರೆ.