ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 45ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ ದಾಖಲೆಯ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಈ ಪಂದ್ಯದಲ್ಲಿ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಅಜೇಯ 70 ಬಾರಿಸಿದರು. ಕೊಹ್ಲಿ ಜೊತೆಗೆ ಮತ್ತೊಂದೆಡೆ ವಿಲ್ ಜ್ಯಾಕ್ಸ್ ಕೂಡ ಭರ್ಜರಿ ಶತಕ ಸಿಡಿದರು. ಈ ಮೂಲಕ ಗುಜರಾತ್ ನೀಡಿದ್ದ 201 ರನ್ ಗುರಿಯನ್ನು ಕೇವಲ 16 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಆರ್‌ಸಿಬಿ ತಲುಪಿತು.

ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದರು. ಗುಜರಾತ್ ಎದುರು ಉತ್ತಮ ನಾಕೌಟ್ ಪಂದ್ಯವಾಡಿದ ಕೊಹ್ಲಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಮೂಲಕ ಅತ್ಯಧಿಕ ಆವೃತ್ತಿಗಳಲ್ಲಿ 500 ಪ್ಲಸ್ ರನ್ ಗಳಿಸಿದ ಎರಡನೇ ಆಟಗಾರ ಹಾಗು ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಬರೆದರು.
ಜೊತೆಗೆ ಆಸ್ಟ್ರೇಲಿಯಾ ದಿಗ್ಗಜ ಬ್ಯಾಟರ್ ಡೇವಿಟ್ ವಾರ್ನರ್ ಹೊಂದಿದ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಡೇವಿಡ್ ವಾರ್ನರ್ 7 ಬಾರಿ 500 ಪ್ಲಸ್ ರನ್ ಗಳಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಈ ಎಲೈಟ್‌ಗೆ ಕ್ಲಬ್‌ಗೆ ಸೇರಿದ್ದಾರೆ.

2008 ಐಪಿಎಲ್ ಆರಂಭದಿಂದಲ್ಲೂ ಆರ್‌ಸಿಬಿ ತಂಡದ ಪರವಾಗಿ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ಈ 17 ವರ್ಷಗಳ ಐಪಿಎಲ್ ಪ್ರಯಾಣದಲ್ಲಿ ಕೊಹ್ಲಿ ಹಲವು ದಾಖಲೆಗಳೊಂದಿಗೆ ಉತ್ತಮ ರನ್ ಕಲೆ ಹಾಕಿದ್ದಾರೆ. 2011 ರಲ್ಲಿ ಮೊದಲ ಬಾರಿಗೆ 557 ರನ್ ಹೊಡೆದು ಮಿಂಚಿದ್ದರು.
ಬಳಿಕ 2013 ರಲ್ಲಿ 634 ಗಳಿಸಿದರೆ, 2015ರಲ್ಲಿ 505 ರನ್, 2016ರಲ್ಲಿ 973 ರನ್, 2018 ರಲ್ಲಿ 530 ರನ್, 2023ರಲ್ಲಿ 639 ರನ್ ಹಾಗು ಪ್ರಸ್ತುತ ನಡೆಯುತ್ತಿರುವ 2024ರ ಐಪಿಎಲ್‌ನಲ್ಲಿ 500* ರನ್ ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ರನ್ :
ಐಪಿಎಲ್ ಇತಿಹಾಸದಲ್ಲಿ ಒಂದು ತಂಡಕ್ಕೆ ಸತತ 177 ವರ್ಷಗಳಿಂದ ಆಡುತ್ತಿರುವ ಯಾರಾದರೂ ಆಟಗಾರರಿದ್ದರೆ ಅದು ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ಮಾತ್ರ. ಇಂತಹ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಈವರೆಗೆ ಆಡಿರುವ 239 ಪಂದ್ಯಗಳಿಂದ 7763 ರನ್ ಗಳಿಸಿದ್ದಾರೆ. ಇದರಲ್ಲಿ 8 ಭರ್ಜರಿ ಶತಕಗಳ ಕೂಡಿದ್ದು, ಬರೋಬ್ಬರಿ 54 ಅರ್ಧಶತಕಗಳು ಕೊಹ್ಲಿ ಬ್ಯಾಟ್‌ನಿಂದ ದಾಖಲಾಗಿವೆ. ಐಪಿಎಲ್‌ನಲ್ಲಿ ಅಜೇಯ 113 ರನ್ ಕೊಹ್ಲಿಯ ವೈಯಕ್ತಿಕ ಬೆಸ್ಟ್ ಸ್ಕೋರ್ ಆಗಿದೆ.
ಕೊಹ್ಲಿ ಬಾರಿಸಿರುವ 8 ಶತಕಗಳ ಪೈಕಿ ನಾಲ್ಕು ಶತಕಗಳನ್ನು 2016ರ ಆವೃತ್ತಿವೊಂದರಲ್ಲೆ ಬಂದಿರುವ ಮತ್ತೊಂದು ಸಾಧನೆ ಆಗಿದೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್, ಶತಕಗಳು ಹೊಡೆದಿರುವವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.