ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರೋಚಕತೆ ಹುಟ್ಟು ಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕಲೆ ಹಾಕಿದ 474 ರನ್‌ಗಳಿಗೆ ಉತ್ತರವಾಗಿ, ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಶತಕದ ಜೊತೆಯಾಟ ಮೂಲಕ ಭಾರತ ತಂಡ ಪಂದ್ಯದಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸಿತು. ಆದರೆ ಜೈಸ್ವಾಲ್ ರನೌಟಾದರು. ನಂತರ, ಕೊಹ್ಲಿ ಸ್ಕಾಟ್ ಬೋಲ್ಯಾಂಡ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್‌ಗೆ 164 ರನ್ ಕಲೆ ಹಾಕಿದೆ. ಇದೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕಿಂತ 310 ರನ್‌ಗಳಷ್ಟು ಹಿಂದಿದೆ. ಇದೇ ವೇಳೆ ಮೆಲ್ಬೋರ್ನ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಜೊತೆ ನಡೆದ ಘಟನೆಯೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 36 ರನ್‌ಗಳಿಗೆ ಔಟಾದರು. ಈ ವೇಳೆ ಪೆವಿಲಿಯನ್‌ಗೆ ಹೋಗುತ್ತಿದ್ದಾಗ ಮೆಲ್ಬೋರ್ನ್ ಸ್ಟೇಡಿಯಂನಲ್ಲಿದ್ದ ಕೆಲವು ಅಭಿಮಾನಿಗಳು ವಿರಾಟ್ ಕೊಹ್ಲಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಭಿಮಾನಿಗಳ ಗುಂಪೊಂದು ವಿರಾಟ್ ಕೊಹ್ಲಿಯನ್ನು ಕೆಣಕಿದೆ. ಇದು ವಿರಾಟ್ ಕೊಹ್ಲಿ ಅವರನ್ನು ಕೆರಳಿಸಿದೆ. ನಡೆದುಕೊಂಡು ಹೋಗುತ್ತಿದ್ದ ವಿರಾಟ್ ಕೊಹ್ಲಿ ಹಿಂದೆ ತಿರುಗಿ ತನ್ನನ್ನು ಗೇಲಿ ಮಾಡುತ್ತಿದ್ದ ಪ್ರೇಕ್ಷರನ್ನು ದಿಟ್ಟಿಸಿ ನೋಡಿದರು.
ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಮೆಲ್ಬೋರ್ನ್ ಸ್ಟೇಡಿಯಂ ಭದ್ರತಾ ಸಿಬ್ಬಂದಿ ವಿರಾಟ್ ಕೊಹ್ಲಿಯನ್ನು ಶಾಂತಗೊಳಿಸಿದರು. ಬಳಿಕ ಭದ್ರತಾ ಸಿಬ್ಬಂದಿ ವಿರಾಟ್ ಕೊಹ್ಲಿಯನ್ನು ಗೌರವದಿಂದ ಪೆವಿಲಿಯನ್ ಕಡೆಗೆ ಕರೆದೊಯ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ದಿನದಿಂದಲೂ ಸ್ಟೇಡಿಯಂನಲ್ಲಿರುವ ತವರಿನ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ಗೇಲಿ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ 19 ವರ್ಷದ ಸ್ಯಾಮ್ ಕಾನ್‌ಸ್ಟಾಸ್ ಭುಜಕ್ಕೆ ಭುಜದಿಂದ ವಿರಾಟ್ ಕೊಹ್ಲಿ ಡಿಕ್ಕಿ ಹೊಡೆದಾಗ ವಾಗ್ವಾದ ಪ್ರಾರಂಭವಾಯಿತು. ವಿರಾಟ್ ಕೊಹ್ಲಿ ನಡೆದುಕೊಂಡ ರೀತಿಯನ್ನು ಹಲವರನ್ನು ಅಚ್ಚರಿಗೊಳಿಸಿತ್ತು. ಕಾನ್‌ಸ್ಟಾಸ್ ಭುಜಕ್ಕೆ ಡಿಕ್ಕಿ ಹೊಡೆದಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಅವರ ಪಂದ್ಯದ ಶುಲ್ಕದ 20 ಪ್ರತಿಶತದಷ್ಟು ದಂಡ ಮತ್ತು ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಯಿತು.
ವಿರಾಟ್ ಕೊಹ್ಲಿ ನಡೆಗೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕೊಹ್ಲಿ ಈ ರೀತಿ ನಡೆದುಕೊಳ್ಳಲು ಕಾರಣ ಏನು ಎಂದು ನನಗೆ ತಿಳಿದಿಲ್ಲ. ಆದರೆ ನಿಜವಾಗಿಯೂ ಕೊಹ್ಲಿಗೆ ಅದರ ಅಗತ್ಯವಿಲ್ಲ. ನಮಗೆ ಕ್ರಿಕೆಟ್‌ನ ಯಾವುದೇ ಮಟ್ಟದಲ್ಲಿ ಇದು ಅಗತ್ಯವಿಲ್ಲ. ನೀವು ದೈಹಿಕವಾಗಿ ಶಕ್ತಿವಂತರಾಗಿದ್ದರೆ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಆಡಬಹುದು. ನಾವೆಲ್ಲರೂ ಕೊಹ್ಲಿಯನ್ನು ಆಟವಾಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳಬೇಕೆಂದು ನಾನು ಭಾವಿಸುತ್ತೇವೆ. ಐಸಿಸಿಯಿಂದ ದಂಡ ಅಥವಾ ನಿಷೇಧಕ್ಕೊಳಗಾದವರಂತೆ ಅಲ್ಲ ಎಂದು ಹೇಳಿದ್ದಾರೆ.