
ಮುಂಬೈ, ಮೇ 31: ಸುಮಾರು ಎರಡು ವಾರಗಳ ಹಿಂದೆ ಕುತ್ತಿಗೆ ನೋವಿಗೆ ಈಡಾಗಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಮುಂಬಯಿಯ ಬಾದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿ ಬುಧವಾರ ಭರ್ಜರಿ ಅಭ್ಯಾಸ ನಡೆಸಿದರು.
ಗಾಯದ ಕಾರಣಕ್ಕೆ ಕೊಹ್ಲಿ ಜೂನ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ನ ಸರ್ರೆ ಕೌಂಟಿ ಕ್ರಿಕೆಟ್ ನಿಂದ ದೂರ ಸರಿದಿದ್ದರು. ಹೀಗಾಗಿ ಮತ್ತೆ ಫಿಟ್ನೆಸ್ ಮರಳಲು ಪ್ರಯತ್ನಿಸುತ್ತಿರುವ ಕೊಹ್ಲಿ, ಬಿಕೆಸಿಯಲ್ಲಿ ಬಿರುಸಿನ ಅಭ್ಯಾಸ ನಡೆಸಿ ಬೆವರಿಳಿಸಿದ್ದಾರೆ. ಮುಂದಿನ ಒಂದು ವಾರದುದ್ದಕ್ಕೂ ಇದೇ ಅಭ್ಯಾಸವನ್ನು ಮುಂದುವರೆಸಲು ಕೊಹ್ಲಿ ಯೋಜನೆ ಹಾಕಿಕೊಂಡಿದ್ದಾರೆ.
ಐಪಿಎಲ್ ಪಂದ್ಯಾಟದ ವೇಳೆ ಕೊಹ್ಲಿ ಕುತ್ತಿಗೆ ನೋವಿಗೊಳಗಾಗಿದ್ದರು. ಇದರಿಂದಾಗಿ ಅವರು ಕೊಂಚದಿನ ವಿಶ್ರಾಂತಿ ಪಡೆದುಕೊಳ್ಳಬೇಕಾಗಿ ಬಂದಿತ್ತು. ಜೂನ್ 15ರಂದು ಕೊಹ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿರುವುದರಿಂದ ಅವರು ಮೈದಾನದಲ್ಲಿ ಬೆವರು ಸುರಿಸಬೇಕಾಗಿದೆ.
ಮುಂಬರಲಿರುವ ಇಂಗ್ಲೆಂಡ್ ಪ್ರವಾಸದ ವೇಳೆ ಫಿಟ್ನೆಸ್ ಮರಳಿ ಪಡೆಯುವ ಇಂಗಿತದಿಂದ ಕೊಹ್ಲಿ ಬಿಕೆಸಿಯಲ್ಲಿ ಅಭ್ಯಾಸ ನಡೆಸಿದರು. ಈ ಸಂದರ್ಭ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಕೊಹ್ಲಿಗೆ ಸಾಥ್ ನೀಡಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಜೂನ್ 14ರಂದು ಆರಂಭವಾಗಲಿದೆ. ಬಳಿಕ ಜೂನ್ 23ರಂದು ಟೀಮ್ ಇಂಡಿಯಾ ಜತೆ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ.