ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯಾದಲ್ಲಿದ್ದು, ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಂದು ಆರಂಭವಾಗಲಿದೆ. ಈ ಸರಣಿಯು ಭಾರತ ತಂಡಕ್ಕೆ ಅಗ್ನಿಪರೀಕ್ಷೆಗಿಂತ ಕಡಿಮೆಯಿಲ್ಲ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಟೆಸ್ಟ್ ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ಗೆಲುವಿನ ಒತ್ತಡದಲ್ಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆ ನಿರ್ಮಾಣವಾಗುವ ಸಾಧ್ಯತೆಯಿದೆ. ಅದರಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮಹತ್ವದ ಸಾಧನೆ ಮಾಡುವ ತವಕದಲ್ಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ. ತವರು ನೆಲದಲ್ಲಿ ಆಸ್ಟ್ರೇಲಿಯಾಕ್ಕೆ ವಿರಾಟ್ ಕೊಹ್ಲಿ ಸಾಕಷ್ಟು ಕಾಡಿದ್ದಾರೆ. ಹೀಗಿರುವಾಗ ಅವರ ಮೇಲಿನ ನಿರೀಕ್ಷೆಗಳು ಜಾಸ್ತಿಯಾಗಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ನಂಬರ್-1 ಆಗುವ ಅವಕಾಶವೂ ಇದೆ. ಉಭಯ ದೇಶಗಳ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಎನಿಸಿಕೊಳ್ಳುವ ಸಾಧ್ಯತೆಯಿದೆ.

ಸ್ಮಿತ್ ಹಿಂದಿಕ್ಕುವ ಅವಕಾಶ
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ 25 ಪಂದ್ಯಗಳ 44 ಇನ್ನಿಂಗ್ಸ್‌ಗಳಲ್ಲಿ 2042 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 8 ಶತಕ ಹಾಗೂ 5 ಅರ್ಧ ಶತಕ ಸಿಡಿಸಿದ್ದಾರೆ. ಆದರೆ ಪ್ರಸ್ತುತ ಆಡುತ್ತಿರುವ ಆಟಗಾರರ ಪೈಕಿ ಸ್ಟೀವ್ ಸ್ಮಿತ್ ಮಾತ್ರ ಕೊಹ್ಲಿಗಿಂತ ಮುಂದಿದ್ದಾರೆ. ಸ್ಮಿತ್ 19 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ 2042 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 9 ಶತಕಗಳಿವೆ. ಈ ಸರಣಿಯಲ್ಲಿ ಸ್ಮಿತ್ ಅವರನ್ನು ಕೊಹ್ಲಿ ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯಗಳಲ್ಲಿ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ನಿವೃತ್ತಿಯಾಗುವ ಮುನ್ನ ಕಾಂಗರೂ ಪಡೆ ವಿರುದ್ಧ 11 ಶತಕ ಗಳಿಸಿದ್ದರು. ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ 8 ಶತಕಗಳನ್ನು ಗಳಿಸಿದ್ದಾರೆ. ಈಗ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದು ಶತಕ ಸಿಡಿಸಿದರೆ ಗವಾಸ್ಕರ್ ಅವರನ್ನು ಹಿಂದಿಕ್ಕಲಿದ್ದಾರೆ. ಸಚಿನ್ ಅವರ ದಾಖಲೆಯನ್ನು ಮುರಿಯಲು ಕೊಹ್ಲಿ 4 ಶತಕಗಳನ್ನು ಗಳಿಸಿಬೇಕಾಗಿದೆ. ಇದು ಕಷ್ಟದ ಕೆಲಸ, ಆದರೆ ವಿರಾಟ್‌ನಂತಹ ಬ್ಯಾಟರ್‌ಗಳಿಗೆ ಕಷ್ಟವೇನಲ್ಲ. ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯುವಲ್ಲಿ ಯಶಸ್ವಿಯಾದರೆ ಭಾರತವೂ ಸರಣಿ ಗೆಲ್ಲಬಹುದು.