ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ. ಸದ್ಯ ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿರುವುದರಿಂದ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿದೆ. ಅಲ್ಲದೆ ಬಿಸಿಸಿಐ ಸಹ ಸ್ಟಾರ್ ಆಟಗಾರರಿಗೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಸೂಚಿಸಿದೆ. ಡಿಸೆಂಬರ್ 24 ರಂದು ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಗಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ತನ್ನ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಪ್ರಕಟಿತ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಸೇರಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಹೆಚ್ಚಿನ ಆಟಗಾರರು ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ವಿದಾಯ ಹೇಳಿದ್ದಾರೆ. ಇವರು ಸದ್ಯ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಉಭಯ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಈ ಸ್ಟಾರ್ ಆಟಗಾರರು ಬರೀ ಏಕದಿನ ಫಾರ್ಮೆಟ್‌ನಲ್ಲಿ ಆಡುತ್ತಿರುವುದರಿಂದ ಇವರಿಬ್ಬರು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿವೆ.

ಬಿಸಿಸಿಐ ಹಿರಿಯ ಆಟಗಾರರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ ಸೂಚಿಸಿದ್ದರಿಂದ ಈ ಇಬ್ಬರೂ ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ಆಡುವ ಸಂಭವ ಹೆಚ್ಚಿದೆ. ಹೀಗಾಗಿ ದೆಹಲಿ ತನ್ನ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ನೀಡಿದೆ. ಈ ಇಬ್ಬರೂ ಆಟಗಾರರು ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆ ಇಳಿಯಲ್ಲಿದ್ದಾರೆ. ಅಲ್ಲಿಯ ವರೆಗೆ ವಿಜಯ್ ಹಜಾರೆ ಟ್ರೋಫಿಯ ಲಿಗ್ ಹಂತದ ಎಲ್ಲ ಪಂದ್ಯಗಳನ್ನು ಇವರು ಆಡುವ ನಿರೀಕ್ಷೆ ಇದೆ. ಡಿಸೆಂಬರ್ 24 ರಂದು ದೆಹಲಿ ತಂಡವು ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರು ಆಡಿದ ಮೂರು ಪಂದ್ಯಗಳಲ್ಲಿ ಅಬ್ಬರಿಸಿದ್ದರು. ಇವರು ರಾಂಚಿ ಹಾಗೂ ರಾಯ್ಪುರದಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಸರಣಿಯಲ್ಲಿ 300ಕ್ಕೂ ಹೆಚ್ಚು ರನ್ ಬಾರಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆಯದ ರಿಷಭ್ ಪಂತ್ ಅವರಿಗೆ ತಮ್ಮ ಕ್ಷಮತೆ ಸಾಬೀತು ಪಡಿಸಲು ಇದು ಬೆಸ್ಟ್ ವೇದಿಕೆ ಆಗಿದೆ.