
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಹೊಸ ಮೊಬೈಲ್ ಕಳೆದುಕೊಂಡಿದ್ದಾರೆ. ಅದೂ ಕೂಡ ಹೊಸ ಮೊಬೈಲ್ ಅನ್‌ಬಾಕ್ಸ್ ಮಾಡುವ ಮುನ್ನವೇ ಕಳೆದುಕೊಂಡಿರುವುದು ಅವರ ಬೇಸರಕ್ಕೆ ಕಾರಣವಾಗಿದೆ.
ವಿರಾಟ್ ಕೊಹ್ಲಿ ಶಾಪಿಂಗ್ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಕ್ರಿಕೆಟಿಗೆ ಎನ್ನುವುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಅಕ್ಷರ್ ಪಟೇಲ್, ಒಮ್ಮೆ ಕೊಹ್ಲಿಯ ಶಾಪಿಂಗ್ ಬಗ್ಗೆ ಹೇಳಿದ್ದರು. ಇಡೀ ತಂಡದಲ್ಲಿ ವಿರಾಟ್ ಕೊಹ್ಲಿ ಹೆಚ್ಚಾಗಿ ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ.
ತಮ್ಮ ಹೆಸರಿನಲ್ಲಿ ಮಾಡದೇ ಅದಕ್ಕಾಗಿಯೋ ಬೇರೆ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಾರೆ. ಆದರೆ, ಈ ಬಾರಿ ಹಾಗೆ ಖರೀದಿಸಿದ ಹೊಸ ಮೊಬೈಲ್ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ನಾಗ್ಪುರದಲ್ಲಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಮೊಬೈಲ್ ಕಳೆದುಕೊಂಡ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಸಾಕಷ್ಟು ಜನ ಇದಕ್ಕೆ ತರೇವಾರಿ ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಯಾರಾದರೂ ನೋಡಿದ್ದೀರಾ ಎಂದ ಕೊಹ್ಲಿ!
ಟ್ವಿಟರ್ ನಲ್ಲಿ ಸಂದೇಶವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, "ಹೊಸ ಮೊಬೈಲ್ ಅನ್ನು ಅನ್‌ಬಾಕ್ಸ್ ಮಾಡುವ ಮುನ್ನವೇ ಕಳೆದುಕೊಳ್ಳುವುದಕ್ಕಿಂತ ದುಖಃದ ಸಂಗತಿ ಮತ್ತೊಂದಿಲ್ಲ. ಯಾರಾದರೂ ನನ್ನ ಮೊಬೈಲ್ ನೋಡಿದ್ದೀರಾ?" ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವು ಮಂದಿ ಯಾವ ಫೋನ್ ಕಳೆದುಕೊಂಡಿದ್ದಿರಾ ಎಂದು ಕೇಳಿದ್ದಾರೆ. ಮತ್ತೆ ಕೆಲವರು ಇದೊಂದು ಜಾಹೀರಾತಿಗಾಗಿ ಮಾಡಿರುವ ಟ್ವೀಟ್ ಎಂದಿದ್ದಾರೆ. ನಥಿಂಗ್ ಎನ್ನುವ ಮೊಬೈಲ್ ಜಾಹೀರಾತಿಗಾಗಿ ಈ ಟ್ವೀಟ್ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ.
ಐಸ್‌ಕ್ರೀಂ ಆರ್ಡರ್ ಮಾಡಿ ಎಂದ ಝೋಮ್ಯಾಟೋ
ವಿರಾಟ್ ಕೊಹ್ಲಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಝೋಮ್ಯಾಟೋ ಆನ್‌ಲೈನ್ ಫುಡ್ ಡೆಲಿವರಿ ಆಪ್ ಅಧಿಕೃತ ಟ್ವಿಟರ್ ಹ್ಯಾಂಡಲ್, "ಅತ್ತಿಗೆ ಮೊಬೈಲ್‌ನಿಂದ ಐಸಿ ಕ್ರೀಂ ಆರ್ಡರ್ ಮಾಡಿ, ಅದು ನಿಮಗೆ ಸಹಾಯ ಮಾಡಬಹುದು" ಎಂದು ಟ್ವೀಟ್ ಮಾಡಿದೆ.
ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಆರ್ಡರ್ ಮಾಡಿರುವ ನನಗೆ ಸರಿಯಾಗಿ ಡೆಲಿವರಿ ಕೊಟ್ಟಿಲ್ಲ ಇನ್ನು ಕೊಹ್ಲಿಗೇನು ಕೊಡ್ತಿರಾ ಎಂದು ಕಾಲೆಳೆದಿದ್ದಾರೆ.
ಮತ್ತೊಬ್ಬರು ಇದಕ್ಕೆ ಪ್ರತಿಕ್ರಿಯೆ ನೀಡಿ, "ವಿರಾಟ್ ಕೊಹ್ಲಿ ಐಸ್ ಕ್ರೀಂ ತಿನ್ನಲ್ಲ, ಕೊಹ್ಲಿ ಸಿಹಿ ತಿನ್ನುವುದನ್ನು ಬಿಟ್ಟಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.