
ನವದೆಹಲಿ, ಮೇ 6: ಪ್ರೀತಿಯ ಸಾಕುನಾಯಿ ಸಾವನ್ನಪ್ಪಿದ್ದಕ್ಕೆ ಸಂತಾಪ ಸೂಚಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. ಮೆಚ್ಚಿನ ಶ್ವಾನ ಬ್ರೂನೊ ಸಾವಿಗೆ ಸಂತಾಪ ಸೂಚಿಸಿರುವ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಮನ ಮುಟ್ಟುವ ಮೆಸೇಜ್ ಬರೆದಿದ್ದಾರೆ.
ನಾಯಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ಕೊಹ್ಲಿ, 'ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಬ್ರೂನೊ. ಸುಮಾರು 11ವರ್ಷಗಳ ಕಾಲ ನಮ್ಮ ಜೀವನವನ್ನು ಅಲಂಕರಿಸಿದ್ದೆ. ಆದರೆ ಬದುಕಿನ ಕೊನೆವರಗೂ ನಿನ್ನ ಭಾವ ಬೆಸುಗೆ ಇದ್ದೇ ಇದೆ. ಇವತ್ತು ಒಳ್ಳೆಯ ಜಾಗಕ್ಕೆ ಹೋಗಿದ್ದೀಯ. ದೇವರು ನಿನ್ನ ಆತ್ಮಕೆ ಶಾಂತಿ ನೀಡಿ ಆಶೀರ್ವದಿಸಲಿ,' ಎಂದು ಬರೆದುಕೊಂದಿದ್ದಾರೆ.
ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಈ ನಾಯಿಯು ಕೊಹ್ಲಿ ಮತ್ತು ಅನುಷ್ಕಾ ಜೊತೆಗಿರುವ ಚಿತ್ರ ಶೇರ್ ಮಾಡಿ, ಅದರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಬ್ರೂನೊ ರೆಸ್ಟ್ ಇನ್ ಪೀಸ್ ಎಂದು ಜೊತೆಗೊಂದೇ ಸಾಲು ಬರೆದಿದ್ದಾರೆ.
ಮಾರ್ಚ್ 29ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದ್ದರೆ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಇಷ್ಟೊತ್ತಿಗೆ ಆಡುತ್ತಿದ್ದರು. ಆದರೆ ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವುದರಿಂದ ಭಾರತದ ಎಲ್ಲಾ ಕ್ರಿಕೆಟಿಗರು ಸದ್ಯ ಬಿಡುವಿನಲ್ಲಿದ್ದಾರೆ.