
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್ ಅಂಗಳದಲ್ಲಿ ಅಹರ್ನಿಶಿಯಾಗಿ ಸಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಟಾಸ್ ಗೆದ್ದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಈವರೆಗೂ ಸೋಲನ್ನೇ ಕಂಡಿಲ್ಲ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿ ಇಂದಿನ ಪಂದ್ಯವನ್ನು ಸೇರಿಸಿಕೊಂಡು ಈವರೆಗೆ 26 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ. ಇದರಲ್ಲಿ ಭಾರತ 21 ಪಂದ್ಯಗಳಲ್ಲಿ ಗೆಲುವನ್ನು ಕಾಂಡು ಬೀಗಿದೆ. ನಾಲ್ಕು ಪಂದ್ಯಗಳನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಟಾಸ್ ಗೆದ್ದ ಈವರೆಗಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಅಜೇಯವಾಗಿಯೇ ಉಳಿದುಕೊಂಡಿದೆ.
ವಿದೇಶಿ ನೆಲದಲ್ಲೂ ವಿರಾ್ ಕೊಹ್ಲಿ ಟಾಸ್ ಗೆದ್ದ ಪಂದ್ಯಗಳ ಫಲಿತಾಂಶ ಶ್ರೇಷ್ಠವಾಗಿಯೇ ಇದೆ. ವಿದೇಶಗಳಲ್ಲಿ 10 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಟಾಸ್ ಗೆದ್ದಿದ್ದು 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮಿಂಚಿದ್ದಾರೆ. ಎರಡು ಪಂದ್ಯಗಳು ಡ್ರಾ ಫಲಿತಾಂಶವನ್ನು ಕಂಡಿದೆ.
ಇನ್ನು ಮತ್ತೊಂದೆಡೆ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ವಿಚಾರದಲ್ಲಿ ಅನುಕೂಲಕರ ಇತಿಹಾಸವನ್ನು ಹೊಂದಿದೆ. ಪಿಂಕ್ ಬಾಲ್‌ನಲ್ಲಿ ಆಡುತ್ತಿರುವ ಎಲ್ಲಾ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಈವರೆಗೆ ಆಸ್ಟ್ರೇಲಿಯಾ ಏಳು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿದ ಇತಿಹಾಸವನ್ನು ಹೊಂದಿದೆ.
ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಒಟ್ಟಾರೆಯಾಗಿ ಎರಡನೇ ಪಿಂಕ್ ಬಾಲ್ ಪಂದ್ಯವಾಗಿದ್ದರೆ ವಿದೇಶದಲ್ಲಿ ಆಡುತ್ತಿರುವ ಮೊದಲ ಪಿಂಕ್ ಬಾಲ್ ಪಂದ್ಯವಾಗಿದೆ. ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಕಳೆದ ವರ್ಷಾಂತ್ಯದಲ್ಲಿ ಆಡಿ ಗೆದ್ದಿತ್ತು. ಇದೀಗ ಎರಡನೇ ಬಾರಿಗೆ ವಿದೇಶದಲ್ಲಿ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ.