
ನವದೆಹಲಿ, ಮೇ 25: 'ಕೊಹ್ಲಿ ನೋಡಲು ಟಿಕೆಟ್ ಖರೀಸಿದವರಿಗೆ ಹಣ ಹಿಂದಿರುಗಿಸುವುದೇ?' ಹೀಗೊಂದು ಕಾಮೆಂಟ್ ಸರ್ರೆ ಕ್ರಿಕೆಟ್ ಕ್ಲಬ್ ನ ಹೋಮ್ ಪೇಜ್ ನಲ್ಲಿ ಕಾಣಿಸಿಕೊಂಡಿದೆ. ಸರ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಭಾಗವಹಿಸದಿರುವುದಕ್ಕೆ ಸಂಘಟಕರ ಬೇಸರ, ಅಸಮಾಧಾನವೇ ಹೀಗೊಂದು ಕಾಮೆಂಟ್ ಕಾಣಿಸಿಕೊಂಡಿರುವುದಕ್ಕೆ ಕಾರಣ.
ಭಾರತದ ಸ್ಟಾರ್ ಬ್ಯಾಟ್ಸ್ಮನ್ ಕೊಹ್ಲಿಯನ್ನು ಇಂಗ್ಲೆಂಡ್ ನ ಸರ್ರೆ ಪಂದ್ಯದಲ್ಲಿ ನೋಡಲಾಗುವುದಿಲ್ಲ ಎಂಬ ಬೇಸರ ಈ ರೀತಿಯ ಕಾಮೆಂಟ್ ಮೂಲಕ ಹೊರಹೊಮ್ಮಿದೆ. ಕೊಹ್ಲಿಯನ್ನು ತನ್ನ ತವರು ನೆಲದ ಪಂದ್ಯದಲ್ಲಿ ನೋಡಲು ಇಂಗ್ಲೆಂಡ್ ಎಷ್ಟು ಕಾತರಿಸಿತ್ತು ಎನ್ನುವುದಕ್ಕೆ ಇದು ಸಾಕ್ಷಿ.
'ಜೂನ್ ತಿಂಗಳಲ್ಲಿ ನಡೆಯಲಿದ್ದ ಸರ್ರೆ ಪಂದ್ಯದಲ್ಲಿ ವಿರಾಟ್ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ನಮಗೆ ತುಂಬಾ ನಿರಾಸೆ ಮೂಡಿಸಿದೆ. ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿಯುವಂತೆ ಸೂಚಿಸಿರುವ ಬಿಸಿಸಿಐ ವೈದ್ಯರ ತಂಡದ ಕಾಳಜಿ ನಮಗೆ ಅರ್ಥವಾಗುತ್ತದೆ. ನಾವದನ್ನು ಗೌರವಿಸುತ್ತೇವೆ ಕೂಡ' ಎಂದು ಸರ್ರೆ ಕ್ರಿಕೆಟ್ ನಿರ್ದೇಶಕ ಅಲೆಕ್ ಸ್ಟೀವರ್ಟ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಕೋಚ್ ರವಿಶಾಸ್ರ್ತಿ, 'ಕೊಹ್ಲಿ ಕೌಂಟಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಯಾಕೆಂದರೆ ಅವರು ಮನುಷ್ಯ; ಯಂತ್ರವಲ್ಲ. ಬೇಕಾದಷ್ಟು ಇಂಧನ ತುಂಬಿಸಿ ನಮಗೆ ಬೇಕಾದಷ್ಟು ದೂರ ರಾಕೆಟನ್ನು ಆರಿಸುವಂತೆ ಕೊಹ್ಲಿಗೆ ಮಾಡಲಾಗೋಲ್ಲ' ಎಂದು ಕೊಂಚ ಖಾರವಾಗೇ ನುಡಿದಿದ್ದಾರೆ.