ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೊನೆಗೂ ಲಯಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಜೋಡಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಈ ವೇಳೆ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಆದರೆ ವಿರಾಟ್ ಕೊಹ್ಲಿ ಸತತ ಎರಡು ಏಕದಿನ ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ವಿರಾಟ್ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದರು.
ಶುಭಮನ್ ಗಿಲ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಇಳಿದ ವಿರಾಟ್ ಕೊಹ್ಲಿ, ಡ್ರೆಸ್ಸಿಂಗ್ ರೂಮ್‌ನಿಂದ ಮೈದಾನಕ್ಕೆ ಇಳಿಯುವಾಗಲೇ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಬ್ಯಾಕ್ ಟು ಬ್ಯಾಕ್ ಸೊನ್ನೆಯ ಒತ್ತಡ ವಿರಾಟ್ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಪಂದ್ಯದಲ್ಲಿ ವಿರಾಟ್ ಒಂದು ರನ್ ಗಳಿಸುತ್ತಲೇ ಖುಷಿ ಪಟ್ಟರು. ಇವರ ಖುಷಿಯ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಮೂರನೇ ಏಕದಿನ ಪಂದ್ಯದಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 74 ರನ್ ಬಾರಿಸಿದ ವಿರಾಟ್ ಆರ್ಭಟಿಸಿದರು. ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 33ನೇ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕ ಬಾರಿಸಿ ಸಂಭ್ರಮಿಸಿದರು.

ಪಂದ್ಯ ಮುಗಿದ ಬಳಿಕ ವಿರಾಟ್ ತಮ್ಮ ಇನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಅವರಿಗೆ ಸಂದರ್ಶನದಲ್ಲಿ ಗಿಲ್ ಕ್ರಿಸ್ಟ್ ಹಾಗೂ ರವಿ ಶಾಸ್ತ್ರಿ ಬ್ಯಾಕ್ ಟು ಬ್ಯಾಕ್ ಸೊನ್ನೆಗೆ ಔಟ್ ಆದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿರುವ ವಿರಾಟ್, ನಾವು ಬಹಳ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇವೆ. ಈ ಆಟ ನಮಗೆ ಬಹಳಷ್ಟು ಕಲಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಾನು 37ನೇ ವಸಂತಕ್ಕೆ ಕಾಲಿಡುವೆ. ನನಾನು ಆರಂಭದಿಂದಲೂ ಚೇಸ್ ಮಾಡುವುದನ್ನು ಇಷ್ಟಪಡುವೆ. ಏಕೆಂದರೆ ಚೇಸಿಂಗ್ ನನ್ನಲ್ಲಿನ ಅತ್ಯುತ್ತಮ ಆಟವನ್ನು ಹೊರತರುತ್ತದೆ. ಈ ಪಂದ್ಯದಲ್ಲಿ ರೋಹಿತ್ ಜೊತೆ ಗೆಲುವಿನ ಪಾಲುದಾರಿಕೆಯನ್ನು ಹೊಂದಿರುವುದು ಅದ್ಭುತವಾಗಿತ್ತು. ಈ ಪಂದ್ಯದಲ್ಲಿ ನಾವಿಬ್ಬರೂ ಪರಿಸ್ಥಿತಿಗೆ ಅನುಗುಣವಾಗಿ ಆಡಿ, ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ರೋಹಿತ್ ಅವರ ಜೊತೆಯಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್, ಸದ್ಯ ನಾವಿಬ್ಬರೂ ಅನುಭವಿ ಜೋಡಿಗಳು. ಆದರೆ ನಾವಿಬ್ಬರೂ ಬಹುದಿನಗಳಿಂದ ಒಂದೇ ಡ್ರೆಸ್ಸಿಂಗ್‌ರೂಮ್ ಹಂಚಿಕೊಂಡಿದ್ದೇವೆ. ಉತ್ತಮ ಜೊತೆಯಾಟಗಳ ಮೂಲಕ ಪಂದ್ಯವನ್ನು ಎದುರಾಳಿಗಳಿಂದ ಕಸಿದುಕೊಳ್ಳಬಹುದು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನನಗೆ ಅನಿಸಿದ ಮಟ್ಟಿಗೆ ನಾನು ಹಾಗೂ ರೋಹಿತ್ 2013ರಲ್ಲಿ ಇಬ್ಬರೂ ಆಸ್ಟ್ರೇಲಿಯಾದಲ್ಲಿ ಒಟ್ಟಿಗೆ ಆಡಲು ಆರಂಭಿಸಿದೆವು. ನಾವಿಬ್ಬರೂ ಇಲ್ಲಿ ಆಡುವುದನ್ನು ಆನಂದಿಸುತ್ತೇವೆ. ಈ ಪಂದ್ಯ ವೀಕ್ಷಿಸಲು ಬಂದ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ವಿರಾಟ್ ತಿಳಿಸಿದ್ದಾರೆ.