
ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಭೀಕರಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಭಿಮಾನಿಗಳು ಪಂತ್ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕೂಡ ರಿಷಭ್ ಪಂತ್ ಚೇತರಿಕೆಗಾಗಿ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ರಿಷಭ್ ಪಂತ್ ಪರವಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ.
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಈ ಅಪಘಾತ ನಡೆದಿದ್ದು ಅಪಘಾತದ ತೀವ್ರತೆಗೆ ಕಾರು ಬೆಂಕಿಗೆ ಆಹುತಿಯಾಗಿದೆ. ಆದರೆ ಅದೃಷ್ಟವಶಾತ್ ಸ್ಥಳೀಯರ ನೆರವಿನಿಂದ ಪಂತ್ ಕಾರಿನಿಂದ ಹೊರಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಪಂತ್ ಚೇತರಿಕೆ ಕಾಣಲಿ ಎಂದು ಕೊಹ್ಲಿ ಟ್ವೀಟ್ ಮೂಲಕ ಹಾರೈಸಿದ್ದಾರೆ. "ಶೀಘ್ರ ಚೇತರಿಸಿಕೊಳ್ಳಿ ರಿಷಭ್ ಪಂತ್, ನಿಮ್ಮ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೇ ನೀಡಿದ್ದಾರೆ. "ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದಿರುವ ಜಯ್ ಶಾ ಪಂತ್ ಕುಟುಂಬಸ್ಥರು ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆಗೆ ಮಾತನಾಡಿದ್ದೇನೆ ಎಂದಿದ್ದಾರೆ. "ರಿಷಭ್ ಪಂತ್ ಆರೋಗ್ಯ ಸ್ಥಿರವಾಗಿದ್ದು ಸ್ಕ್ಯಾನ್‌ಗಳನ್ನು ನಡೆಸಲಾಗುತ್ತಿದೆ. ಅವರ ಆರೋಗ್ಯವನ್ನು ನಾವು ನಿಕಟವಾಗಿ ಗಮನಿಸುತ್ತಿದ್ದು ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಿದ್ದೇವೆ" ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ರಿಷಭ್ ಪಂತ್ ಹರಿದ್ವಾರ ಜಿಲ್ಲೆಯ ಮಂಗ್ಲೌರ್ ಹಾಗೂ ನರ್ಸಾನ್ ಮಧ್ಯೆ ಅಪಘಾತಕ್ಕೆ ಒಳಗಾಗಿದ್ದಾರೆ. ಈ ಅಪಘಾತದ ಬಗ್ಗೆ ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದು ಸ್ವತಃ ರಿಷಭ್ ಪಂತ್ ಹೇಳಿರುವಂತೆ ನಿದ್ದೆಯ ಮಂಪರಿಗೆ ಒಳಗಾದ ಕಾರಣ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದಿದ್ದಾರೆ. ಅಪಘಾತದ ನಡೆದ ಸಂದರ್ಭದಲ್ಲಿ ರಿಷಭ್ ಪಂತ್ ಮಾತ್ರವೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.