ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಕೊಹ್ಲಿ ಔಟಾಗಿದ್ದರು. ನಂತರ ಎರಡನೇ ಇನ್ನಿಂನ್ಸ್‌ನಲ್ಲಿ ವಿರಾಟ್ ರೂಪ ತೋರಿದ ಅವರು 70 ರನ್‌ಗಳ ಬಾರಿಸಿದ್ದರು.
ಕಳೆದ ಒಂದು ವರ್ಷದಿಂದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸೈಲೆಂಟ್ ಆಗಿದ್ದಾರೆ. ಈ ವರ್ಷ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿರಲಿಲ್ಲ. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯ ಟೆಸ್ಟ್ ಸರಣಿಯಲ್ಲಿ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿದರು. ಆದರೆ ಶತಕ ಬಾರಿಸಲು ಸಾಧ್ಯವಾಗಲಿಲ್ಲ.

ಇದೀಗ ಪುಣೆಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡುವ ಅವಕಾಶವನ್ನು ಹೊಂದಿದ್ದಾರೆ. ಇದಕ್ಕಾಗಿ ಅವರು ಉತ್ತಮ ಇನ್ನಿಂಗ್ಸ್ ಕಟ್ಟಬೇಕಾಗಿದೆ. ಇದರೊಂದಿಗೆ ಅವರು ಡಾನ್ ಬ್ರಾಡ್ಮನ್ ಮತ್ತು ಸನತ್ ಜಯಸೂರ್ಯ ಅವರಂತಹ ದಿಗ್ಗಜರ ದಾಖಲೆಯನ್ನು ಮುರಿಯಲಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಅಂಕಿ-ಅಂಶಗಳನ್ನು ಗಮನಿಸಿದರೆ, ಅವರು ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ 267 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಅವರ ಅತ್ಯಧಿಕ ಟೆಸ್ಟ್ ಸ್ಕೋರ್ ಅಜೇಯ 254 ರನ್. 2019ರ ಅಕ್ಟೋಬರ್ 10 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ದ್ವಿಶತಕ ಬಾರಿಸಿದ್ದರು. 254 ರನ್ ಕೊಹ್ಲಿ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಕೂಡ ಆಗಿದೆ. ಮತ್ತೊಮ್ಮೆ ಇದೇ ಮೈದಾನದಲ್ಲಿ ಕಣಕ್ಕೀಳಿಯುತ್ತಿರುವ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಏನೆಲ್ಲಾ ಸಾಧನೆ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ ಟೆಸ್ಟ್ ಶತಕಗಳ ವಿಷಯದಲ್ಲಿ ಶ್ರೇಷ್ಠ ಡಾನ್ ಬ್ರಾಡ್ಮನ್ ಅವರನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ. ವಿರಾಟ್ 29 ಟೆಸ್ಟ್ ಶತಕಗಳೊಂದಿಗೆ ಡಾನ್ ಬ್ರಾಡ್ಮನ್ ಅವರನ್ನು ಸರಿಗಟ್ಟಿದ್ದಾರೆ. ಪುಣೆ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಮ್ಮ ವೃತ್ತಿಜೀವನದ 30ನೇ ಶತಕ ಬಾರಿಸಿದ ಕೂಡಲೇ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಗ್ರೆಗ್ ಚಾಪೆಲ್, ಸನತ್ ಜಯಸೂರ್ಯ, ರಾಮನರೇಶ್ ಸರ್ವಾನ್, ತಮೀಮ್ ಇಕ್ಬಾಲ್ ಮತ್ತು ಬ್ರೆಂಡನ್ ಮೆಕಲಮ್ ಅವರಂತಹ ದಿಗ್ಗಜರೊಂದಿಗೆ 31 ಟೆಸ್ಟ್ ಅರ್ಧಶತಕಗಳನ್ನು ಗಳಿಸಿರುವ ಕೊಹ್ಲಿ ಪ್ರಸ್ತುತ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸುವ ಮೂಲಕ ಅವರಿಗಿಂತ ಕೊಹ್ಲಿ ಮುಂದೆ ಹೋಗಲಿದ್ದಾರೆ. ಇದರೊಂದಿಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು 38.77 ರ ಸರಾಸರಿಯಲ್ಲಿ 2404 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 11 ಅರ್ಧ ಶತಕಗಳು ಸೇರಿವೆ. ಈಗ ಡಬ್ಲ್ಯೂಟಿಸಿಯಲ್ಲಿ ಹೆಚ್ಚಿನ ರನ್‌ಗಳ ಗಳಿಸಿರುವವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ಕೊಹ್ಲಿ ಮೇಲೇರಬಹುದು. ಡಬ್ಲ್ಯೂಟಿಸಿನಲ್ಲಿ ವಾರ್ನರ್ 2423 ರನ್ ಗಳಿಸಿದ್ದಾರೆ. ವಾರ್ನರ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ 20 ರನ್‌ಗಳ ಅವಶ್ಯಕತೆಯಿದೆ.
ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ 936 ರನ್ ಗಳಿಸಿದ್ದು, ಭಾರತ-ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರರಾಗಿದ್ದಾರೆ. 964 ರನ್‌ಗಳನ್ನು ಹೊಂದಿರುವ ಗ್ರಹಾಂ ಡೌಲಿಂಗ್ ಅವರ ದಾಖಲೆಯನ್ನು ಮುರಿಯಲು ಕೊಹ್ಲಿ ಕೇವಲ 29 ರನ್‌ಗಳ ಅಂತರದಲ್ಲಿದ್ದಾರೆ. ಈ ದಾಖಲೆಯನ್ನು ಕೊಹ್ಲಿ ಮಾಡಿದರೆ ನಾಲ್ಕನೇ ಸ್ಥಾನಕ್ಕೆ ತಲುಪಲಿದ್ದಾರೆ. ಇದಲ್ಲದೆ, ಏಷ್ಯಾದಲ್ಲಿ ಆಡುವಾಗ ವಿರಾಟ್ ಕೊಹ್ಲಿಗೆ 16000 ಅಂರಾರಾಷ್ಟ್ರೀಯ ರನ್ ಪೂರೈಸುವ ಉತ್ತಮ ಅವಕಾಶವಿದೆ. ಈ ದಾಖಲೆಯನ್ನು ಕೊಹ್ಲಿಗೆ ಬೇಕಿರುವುದು 55 ರನ್ ಮಾತ್ರ.
ಏಷ್ಯಾದಲ್ಲಿ ಕೊಹ್ಲಿ ಆಡುವಾಗ ಇದುವರೆಗೆ 308 ಪಂದ್ಯಗಳ 334 ಇನ್ನಿಂಗ್ಸ್‌ಗಳಲ್ಲಿ 15945 ರನ್ ಗಳಿಸಿದ್ದಾರೆ. ಕೊಹ್ಲಿ 52 ಶತಕ ಹಾಗೂ 78 ಅರ್ಧ ಶತಕಗಳನ್ನು ಹೊಂದಿದ್ದಾರೆ. 16000 ರನ್ ಪೂರೈಸುವ ಮೂಲಕ ಏಷ್ಯಾದ ನಾಲ್ಕನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.