ಜುಲೈ 4 ಗುರುವಾರ, ಟಿ20 ವಿಶ್ವಕಪ್ ಗೆದ್ದ ಭಾರತ ತಂಡವು ತಾಯ್ನಾಡಿಗೆ ಮರಳಿದೆ. ಟೀಮ್ ಇಂಡಿಯಾ ಆಟಗಾರರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣದಲ್ಲಿ ಸಹಸ್ರಾರು ಅಭಿಮಾನಿಗಳು ಸೇರಿದರು.
ವಿಮಾನ ನಿಲ್ದಾನದಿಂದ ಟೀಮ್ ಇಂಡಿಯಾ ಆಟಗಾರರು ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಅದ್ಧೂರಿಯಾಗಿ ಬರ ಮಾಡಿಕೊಂಡರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಈ ವೇಳೆ ಆಟಗಾರರಿಗೆ ಭವ್ಯ ಸ್ವಾಗತ ಕೋರಿದರು.

ಇದೇ ವೇಳೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಭಿಮಾನಿಗಳ ಮನ ಗೆದ್ದರು. ಅಭಿಮಾನಿಗಳ ಉತ್ಸಾಹ ನೋಡಿದ ಕೊಹ್ಲಿ ಕೂಡ ತಡೆಯಲಾರದೆ ಬಸ್ಸಿನೊಳಗಿಂದಲೇ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡರು.
ವಿರಾಟ್ ಕೊಹ್ಲಿ ತಮ್ಮ ಫೋನ್‌ನಲ್ಲಿ ಅಭಿಮಾನಿಗಳನ್ನು ಸೆರೆಹಿಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಹ್ಲಿ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇಂದು ಸಂಜೆ ಮುಂಬೈನಲ್ಲಿ ಟೀಮ್ ಇಂಡಿಯಾ ತೆರೆದ ಬಸ್ ವಿಕ್ಟರಿ ಪರೇಡ್ ನಡೆಸಲಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಟೀಮ್ ಇಂಡಿಯಾ ಆಟಗಾರರು ಭೇಟಿ ಮಾಡಲಿದ್ದಾರೆ.
ಚಾಂಪಿಯನ್ ಟೀಮ್ ಇಂಡಿಯಾವನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ಗುಂಪು ಜಮಾಯಿಸಿತ್ತು. ಆಟಗಾರರು ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ ಅಭಿಮಾನಿಗಳು 'ಇಂಡಿಯಾ ಇಂಡಿಯಾ' ಎಂದು ಕೂಗಲಾರಂಭಿಸಿದರು.
ಅಭಿಮಾನಿಗಳ ಈ ವರ್ತನೆ ಕಂಡು ಆಟಗಾರರಲ್ಲೂ ಉತ್ಸಾಹಗೊಂಡರು. ನಾಯಕ ರೋಹಿತ್ ಶರ್ಮಾ ವಿಶ್ವಕಪ್ ಟ್ರೋಫಿಯನ್ನು ಮೇಲಕ್ಕೆತ್ತಿ ಅಭಿಮಾನಿಗಳಿಗೆ ತೋರಿಸಿದರು. ಇದಾದ ಬಳಿಕ ಟೀಮ್ ಇಂಡಿಯಾ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಿ ಹೋಟೆಲ್ ಐಟಿಸಿ ಮೌರ್ಯಕ್ಕೆ ತೆರಳಿದರು. ವಿಶ್ರಾಂತಿ ಪಡೆದ ಬಳಿಕ ಆಟಗಾರರು ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಲಿದ್ದಾರೆ.
ಬಿಸಿಸಿಐ ವ್ಯವಸ್ಥೆ ಮಾಡಿದ ವಿಶೇಷ ಬಸ್‌ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳ ಗುಂಪನ್ನು ನೋಡಿ ನಂತರ ತಮ್ಮ ಫೋನ್‌ನಿಂದ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಇದಲ್ಲದೇ ವಿರಾಟ್ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧ 2024ರ ಟಿ 20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ವಿಶ್ವಕಪ್ ಗೆದ್ದ ನಂತರ, ಕೊಹ್ಲಿ ಟಿ20 ಅಂತರಾಷ್ಟ್ರೀಯ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದರು. ನಾಯಕ ರೋಹಿತ್ ಶರ್ಮಾ ಹಾಗು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಈ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.
ನವದೆಹಲಿಯ ಹೋಟೆಲ್ ಐಟಿಸಿ ಮೌರ್ಯ ತಲುಪಿದ ಸಂದರ್ಭದಲ್ಲೂ ಟೀಮ್ ಇಂಡಿಯಾ ಆಟಗಾರರು ಅತ್ಯಂತ ಸಂತವಾಗಿದರು. ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಭಾಂಗ್ರಾ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು. ಈ ಸುಂದರ ಕ್ಷಣವನ್ನು ಅಭಿಮಾನಿಗಳು ನೋಡಿ ಕಣ್ತುಂಬಿಕೊಂಡರು.