ಧೋನಿ ನಿವೃತ್ತಿ ಸುದ್ದಿ ಹಬ್ಬಿಸಿದ್ದ ಚಿತ್ರದ ಹಿಂದಿನ ಸತ್ಯ ಬಾಯ್ಬಿಟ್ಟ ಕೊಹ್ಲಿ!

ಧರ್ಮಶಾಲಾ, ಸೆಪ್ಟೆಂಬರ್ 14: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ಗಾಳಿ ಸುದ್ದಿ ಹಬ್ಬಿಸಿ ದಿನವಿಡೀ ಚರ್ಚಿಸಲ್ಪಟ್ಟಿದ್ದ ಫೋಟೋವೊಂದರ ಬಗ್ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಹಿಂದಿನ ಪಂದ್ಯವೊಂದ ಫೋಟೋವನ್ನು ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದು ಧೋನಿ ನಿವೃತ್ತಿ ಸುಳಿವಿನ ಗಾಳಿ ಸುದ್ದಿಗೆ ಕಾರಣವಾಗಿತ್ತು.
ಗುರುವಾರ (ಸೆಪ್ಟೆಂಬರ್ 12) ಕೊಹ್ಲಿ, ಧೋನಿ ಜೊತೆಗಿನ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು. ಅದು 2016ರ ವರ್ಲ್ಡ್ ಟಿ20 ಸೂಪರ್ 10ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಫೋಟೋ. ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋ ಶೇರ್ ಮಾಡುವಾಗ ಕೊಹ್ಲಿ ಮನಸ್ಸಿನಲ್ಲೇನಿತ್ತು ಅನ್ನೋದನ್ನು ಕೊಹ್ಲಿ ಹೇಳಿಕೊಂಡಿದ್ದಾರೆ.

ಮರೆಯಲಾರದ ಪಂದ್ಯ
ಫೋಟೋದ ಜೊತೆ ಕೊಹ್ಲಿ, 'ನಾನು ಯಾವತ್ತಿಗೂ ಮರೆಯಲಾರದ ಪಂದ್ಯವದು. ವಿಶೇಷ ಇರುಳದು. ಆವತ್ತು ಈ ಮನುಷ್ಯ ನನ್ನನ್ನು ಫಿಟ್‌ನೆಸ್ ಟೆಸ್ಟ್‌ಗೆ ಓಡಿಸುವ ಹಾಗೆ ಓಡಿಸಿಬಿಟ್ಟಿದ್ದ' ಎಂದು ಬರೆದುಕೊಂಡಿದ್ದರು. ಯಾಕೆಂದರೆ ಅಂದಿನ ಆ ಪಂದ್ಯದಲ್ಲಿ ರನ್‌ಗಾಗಿ ಕೊಹ್ಲಿಯನ್ನು ಧೋನಿ ಸಿಕ್ಕಾಪಟ್ಟೆ ಓಡಿಸಿದ್ದರು. ಆದರೆ ಈ ಫೋಟೋ ಧೋನಿ ನಿವೃತ್ತಿ ಗಾಳಿಸುದ್ದಿ ಹಬ್ಬಿಸಿತ್ತು.

ಸುದ್ದಿಗೋಷ್ಠಿಯಲ್ಲಿ ಕೊಹ್ಲಿ
ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಆ ಫೋಟೋ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, 'ನನ್ನ ತಲೆಯಲ್ಲಿ ಆಗ ಏನೂ ಇರಲಿಲ್ಲ ಗೆಳೆಯಾ,' ಎಂದಿದ್ದಾರೆ.

ಇದನ್ನೂ ಹಾಗೇ ಹಾಕಿದ್ದೆ
ಮಾತು ಮುಂದುವರೆಸಿದ ಕೊಹ್ಲಿ, 'ಮನೆಯಲ್ಲಿ ಕೂತಿದ್ದಾಗ ನಾನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕುತ್ತಿರುತ್ತೇನೆ. ಹಾಗೇ ಇದನ್ನೂ ಹಾಕಿದ್ದೆನಷ್ಟೇ. ಆದರೆ ಇದು ಸುದ್ದಿಗೆ ವಸ್ತುವಾಯಿತು,' ಎಂದು ಪ್ರತಿಕ್ರಿಯಿಸಿದರು. ಕೊಹ್ಲಿ ಅಂದು ಹಾಕಿದ್ದ ಪೋಸ್ಟನ್ನು ಜಾಲತಾಣಿಗರು ಅದು ಧೋನಿ ನಿವೃತ್ತಿಗೂ ಮುನ್ನ ಕೊಹ್ಲಿ ಗೌರವ ಸಲ್ಲಿಸುತ್ತಿರುವುದಿರಬಹುದು ಎಂದು ಭಾವಿಸಿದ್ದರು.

ಈ ಘಟನೆ ನಂಗೊಂದು ಪಾಠ
'ನನಗನ್ನಿಸುವಂತೆ ಈ ಘಟನೆ ನಂಗೊಂದು ಪಾಠ. ನಾನೇನು ಯೋಚಿಸುತ್ತೇನೋ ಅದೇ ದಾರಿಯಲ್ಲಿ ಜಗತ್ತೂ ಯೋಚಿಸಲಾರದು ಎಂದು ನಾನು ಇದರಿಂದ ಅರ್ಧ ಮಾಡಿಕೊಳ್ಳಬೇಕು. ಈ ಫೋಟೋ ನೋಡಿ ಧೋನಿ ನಿವೃತ್ತಿಗೆ ನಾನು ಗೌರವ ಸಲ್ಲಿಸುತ್ತಿರುವುದಾಗಿ ಜನ ಭಾವಿಸುತ್ತಾರೆ ಎಂಬ ವಿಚಾರವೇ ಆ ಫೋಟೋ ಹಾಕುವಾಗ ನನ್ನ ತಲೆಗೆ ಹೊಳೆಯಲಿಲ್ಲ, ಸುಮ್ಮನೆ ಹಾಕಿದ್ದೆನಷ್ಟೆ,' ಎಂದು ಕೊಹ್ಲಿ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications