ಮಂಗಳವಾರ, ಸೆಪ್ಟೆಂಬರ್ 12ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತದ ರೋಚಕ ಪಂದ್ಯದಲ್ಲಿ ಭಾರತ ಮತ್ತು ಆತಿಥೇಯ ಶ್ರೀಲಂಕಾ ತಂಡಗಳು ಸೆಣಸಾಡುತ್ತಿವೆ.
ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಯನ್ನು ಸ್ಥಾಪಿಸಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 5,000 ರನ್ ಗಳಿಸಿದ ವೇಗದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯು ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ ಜೋಡಿಯನ್ನು ಹಿಂದಿಕ್ಕಿತು.

ವೆಸ್ಟ್ ಇಂಡೀಸ್ ಜೋಡಿ 97 ಇನ್ನಿಂಗ್ಸ್‌ಗಳಲ್ಲಿ 5,000 ರನ್ ಗಡಿಯನ್ನು ತಲುಪಿದ್ದರು. ಮಂಗಳವಾರ, ಸೆಪ್ಟೆಂಬರ್ 12ರಂದು ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 5,000 ರನ್ ಗಡಿ ತಲುಪಿದರು.
ಇನ್ನು ಭಾರತೀಯ ಬ್ಯಾಟರ್‌ಗಳ ವಿಷಯಕ್ಕೆ ಬಂದರೆ, ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ, ರೋಹಿತ್ ಮತ್ತು ಶಿಖರ್ ಧವನ್ ಜೋಡಿ ಈಗಾಗಲೇ 5,000 ಏಕದಿನ ರನ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿ ಉಳಿದವರೆಲ್ಲರಿಗಿಂತ ವೇಗವಾಗಿ ದಾಖಲಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಈವರೆಗಿನ ಜೊತೆಯಾಟದಲ್ಲಿ 62.47ರ ಸರಾಸರಿಯಲ್ಲಿ 18 ಶತಕಗಳು ಮತ್ತು 15 ಅರ್ಧಶತಕಗಳನ್ನು ಒಟ್ಟಿಗೆ ಸೇರಿಸಿದ್ದಾರೆ.
2018ರಲ್ಲಿ ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 246 ರನ್‌ಗಳನ್ನು ದಾಖಲಿಸಿದಾಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಅತ್ಯುನ್ನತ ಜೊತೆಯಾಟ ನಿರ್ಮಿಸಿದ್ದರು. ಆದರೆ, ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಮೂರು ರನ್‌ಗಳಿಗೆ ಔಟಾಗುವುದರೊಂದಿಗೆ ಇವರಿಬ್ಬರು ಸುದೀರ್ಘ ಜೊತೆಯಾಟ ನಿರ್ಮಿಸಲು ಸಾಧ್ಯವಾಗಲಿಲ್ಲ.
ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಂತರ 10,000 ರನ್ ಗಳಿಸಿದ ಎರಡನೇ ವೇಗದ ಬ್ಯಾಟರ್ ಎನಿಸಿದರು. ಭಾರತ ತಂಡದ ನಾಯಕ 53 ರನ್ ಗಳಿಸಿದ ಬಳಿಕ ದುನಿತ್ ವೆಲ್ಲಲಾ ಎಸೆತದಲ್ಲಿ ಬೌಲ್ಡ್ ಆದರು. ಈ ಮೊದಲು ವಿರಾಟ್ ಕೊಹ್ಲಿಯನ್ನೂ ಔಟ್ ಮಾಡಿದರು.
ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿದ್ದರೆ, ವಿರಾಟ್ ಕೊಹ್ಲಿ ಪಂದ್ಯವಿಜೇತ ಶತಕ ಸಿಡಿಸಿದ ಕಾರಣ, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ 233 ರನ್‌ಗಳ ಜೊತೆಯಾಟದ ಮೂಲಕ ಭಾರತ ತಂಡ 356 ರನ್ ಕಲೆಹಾಕಿತು.
ಹಲವು ವರ್ಷಗಳಿಂದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದ್ಭುತ ಕೊಡುಗೆ ನೀಡಿದ್ದಾರೆ. ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಜೋಡಿಯಾಗಿ ದೊಡ್ಡ ಪರೀಕ್ಷೆ ಎದುರಿಸಲಿದ್ದಾರೆ. ಇದು ಇವರಿಬ್ಬರ ಪಾಲಿಗೆ ಅಂತಿಮ ಏಕದಿನ ವಿಶ್ವಕಪ್ ಕೂಡ ಆಗಿರಬಹುದು.