ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರುತುರಾಜ್ ಗಾಯಕ್ವಾಡ್ ಅಬ್ಬರ ನಡೆಸಿದ್ದಾರೆ. ರಾಯ್ಪುರ್‌ದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಈ ವೇಳೆ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಹಾಗೂ ಭರವಸೆಯ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಶತಕ ಬಾರಿಸಿ ಮಿಂಚಿದರು. ರುತುರಾಜ್ ಮೊದಲ ಶತಕ ಬಾರಿಸಿ ಮಿಂಚಿದರೆ, ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 53ನೇ ಶತಕ ಬಾರಿಸಿದರು.
ರೋಹಿತ್ ಶರ್ಮಾ (14) ಹಾಗೂ ಯಶಸ್ವಿ ಜೈಸ್ವಾಲ್ (22) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಭಾರತ 62 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ರುತುರಾಜ್ ಗಾಯಕ್ವಾಡ್ ಹಾಗೂ ವಿರಾಟ್ ಕೊಹ್ಲಿ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದರು. ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ಮನ ಬಂದಂತೆ ಕಾಡಿದ ಜೋಡಿ ಅಬ್ಬರಿಸಿತು. ವಿರಾಟ್, ರುತುರಾಜ್ ಗಾಯಕ್ವಾಡ್ ಜೋಡಿ 156 ಎಸೆತಗಳಲ್ಲಿ 195 ರನ್‌ಗಳ ಜತೆಯಾಟವನ್ನು 3ನೇ ವಿಕೆಟ್‌ಗೆ ನೀಡಿತು.

28 ವರ್ಷದ ರುತುರಾಜ್ ಗಾಯಕ್ವಾಡ್ ಅವರು ತಮ್ಮ ವತ್ತಿ ಜೀವನದ 8ನೇ ಪಂದ್ಯದಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ಮೂಲಕ ದೇಶೀಯ ಫಾರ್ಮೆಟ್‌ನಲ್ಲಿ ಕಂಡುಕೊಂಡಿದ್ದ ಅಮೋಘ ಲಯವನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಮುಂದುವರೆಸಿದರು. ಶ್ರೇಯಸ್ ಅಯ್ಯರ್ ಗಾಯಕ್ಕೆ ತುತ್ತಾಗಿದ್ದರಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ರುತುರಾಜ್ ಗಾಯಕ್ವಾಡ್ ಅವರು ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು. ಇವರು 83 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿ ಔಟ್ ಆದರು.
ಮೊದಲ ಏಕದಿನ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ರುತುರಾಜ್ ಗಾಯಕ್ವಾಡ್ ಅವರು, ಎರಡನೇ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು ಪಂದ್ಯದಲ್ಲಿ ಯಾವುದೇ ಲೂಸ್ ಶಾಟ್‌ಗಳನ್ನು ಬಳಸಲಿಲ್ಲ. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ರುತುರಾಜ್ ಅಬ್ಬರಿಸಿದರು. ಈ ಮೂಲಕ ತಮ್ಮ ಚೊಚ್ಚಲ ಏಕದಿನ ಕ್ರಿಕೆಟ್ ಶತಕವನ್ನು ಬಾರಿಸಿ ಸಂಭ್ರಮಿಸಿದರು.
ವಿರಾಟ್ ಕೊಹ್ಲಿ ಸದ್ಯ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಭಾರತದ ಪರ ಆಡುತ್ತಿದ್ದಾರೆ. ಹೀಗಾಗಿ ಇವರ ಆಟವನ್ನು ಕಣ್ಣುತುಂಬಿಕೊಳ್ಳಲು ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು. ವಿರಾಟ್ ರಾಂಚಿಯಲ್ಲಿ ಆಡಿದ ಧಾಟಿಯಲ್ಲೇ ರಾಯ್ಪುರ್‌ದಲ್ಲೂ ಮಿಂಚಿನ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಪ್ರದರ್ಶನದ ಮೇಲೆ ಇದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಬ್ಯಾಕ್ ಟು ಬ್ಯಾಕ್ 10ನೇ ಶತಕ ಬಾರಿಸಿದ ವಿರಾಟ್ ಅಬ್ಬರಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಸರಣಿಯಲ್ಲಿ 2ನೇ ಶತಕ ಬಾರಿಸುವ ಮೂಲಕ ಅಬ್ಬರಿಸಿದರು. ವಿರಾಟ್ 93 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 102 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.