ರೋಹಿತ್ ಶರ್ಮಾ ನಾಯಕತ್ವದಲ್ಲಿನ ಹುಳುಕು ವಿವರಿಸಿದ ವಿರಾಟ್ ಕೊಹ್ಲಿ ಬಾಲ್ಯದ ಕೋಚ್

ಭಾರತ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದಲೂ ವಿರಾಟ್ ಕೊಹ್ಲಿ ಕೆಳಗಿಳಿದಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳುವ ಮೂಲಕ ಟಿ20 ಏಕದಿನ ಮಾದರಿಯ ಬಳಿಕ ಮೂರು ಮಾದರಿಗೂ ರೋಹಿತ್ ಶರ್ಮಾ ಅವರೇ ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿಯನ್ನು ಸ್ವೀಕರಿಸಿದ್ದಾರೆ. ಭಾರತ ತಂಡದ ಹಂಗಾಮಿ ನಾಯಕನಾಗಿ ಹಾಗೂ ಐಪಿಎಲ್‌ನಲ್ಲಿ ಸಾಧಿಸಿರುವ ಯಶಸ್ಸಿನ ಕಾರಣದಿಂದಾಗಿ ರೋಹಿತ್ ಶರ್ಮಾ ನಾಯಕತ್ವದ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು ಅದಕ್ಕೆ ಪೂರಕ ಪ್ರದರ್ಶನಗಳು ಆರಂಭದಲ್ಲಿ ಬಂದಿರುವುದು ಸಕಾರಾತ್ಮಕ ಅಂಶವಾಗಿದೆ.
ನಾಯಕನಾಗಿ ವಿರಾಟ್ ಕೊಹ್ಲಿ ಆಕ್ರಮಣಕಾರಿ ಮನೋವೃತ್ತಿಯನ್ನು ಹೊಂದಿರುವುದು ಅವರ ನಾಯಕತ್ವದ ಪ್ರಮುಖ ಅಂಶವಾಗಿತ್ತು. ಆದರೆ ರೋಹಿತ್ ಶರ್ಮಾ ಅವರ ನಾಯಕತ್ವದ ಪ್ರಮುಖ ಅಂಶವೆಂದರೆ ಅವರಲ್ಲಿನ ತಾಳ್ಮೆ. ಆದರೆ ಇತ್ತೀಚೆಗೆ ಮುಕ್ತಾಯವಾಗಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಕ್‌ಕುಮಾರ್ ಶರ್ಮಾ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿರುವ ಹುಳುಕನ್ನು ಬೊಟ್ಟು ಮಾಡಿದ್ದಾರೆ. ಇದಕ್ಕೆ ರೋಹಿತ್ ಶರ್ಮಾ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ ರಾಜ್‌ಕುಮಾರ್ ಶರ್ಮಾ.

ನಾಯಕನಾಗಿ ರೋಹಿತ್ ತಾಳ್ಮೆ ಕಳೆದುಕೊಳ್ಳಬಾರದು
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಮಾತನಾಡಿರುವ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ರೋಹಿತ್ ಶರ್ಮಾ ತನ್ನ ತಾಳ್ಮೆಯ ಮನೋವೃತ್ತಿಯನ್ನು ಮುಂದುವರಿಸಬೇಕು ಎಂದಿದ್ದಾರೆ. ಇಂತಾ ಹಂತದಲ್ಲಿ ತಂಡದ ಆಟಗಾರರು ತಪ್ಪು ಮಾಡಿದಾಗ ಕೋಪಗೊಳ್ಳುವುದನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎಂದಿದ್ದಾರೆ ರಾಜ್‌ಕುಮಾರ್ ಶರ್ಮಾ. ತಂಡದ ಆಟಗಾರರು ತಪ್ಪು ಮಾಡಿದಾಗಲೂ ನಾಯಕನಾಗಿ ತಾಳ್ಮೆಯಿಂದಲೇ ರೋಹಿತ್ ಶರ್ಮಾ ಮುಂದುವರಿಯಬೇಕು ಎಂದಿದ್ದಾರೆ.

ರೋಹಿತ್ ತಾಳ್ಮೆಗೆ ಖ್ಯಾತಿ
"ರೋಹಿತ್ ಶರ್ಮಾ ಶಾಂತಚಿತ್ತದ ನಾಯಕ ಎಂದೇ ಖ್ಯಾತರಾಗಿದ್ದಾರೆ. ಆದರೆ ನಾವು ಇತ್ತೀಚೆಗೆ ಅವರು ಮೈದಾನದಲ್ಲಿ ತಾಳ್ಮೆ ಕಳೆದುಕೊಂಡಿರುವ ಪ್ರಸಂಗವನ್ನು ನೋಡಿದ್ದೇವೆ. ತನ್ನ ತಂಡದ ಸಹ ಆಟಗಾರರ ಮೇಲಿನ ಕೋಪವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸದೇ ಇರುವುದನ್ನು ರೋಹಿತ್ ಶರ್ಮಾ ಕಲಿತುಕೊಳ್ಳಬೇಕಿದೆ. ಯಾರಾದರೂ ತಪ್ಪನ್ನು ಮಾಡಿದರೆ ಆಟಗಾರರು ಅರ್ಥ ಮಾಡಿಕೊಳ್ಳಲು ತಾಳ್ಮೆಯಿಂದಲೇ ವಿವರಿಸುವ ಅಗತ್ಯವಿದೆ" ಎಂದು ರಾಜ್‌ಕುಮಾರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ವಿಂಡೀಸ್ ವಿರುದ್ಧದ ಸರಣಿಯಲ್ಲಿ ತಾಳ್ಮೆ ಕಳೆದುಕೊಂಡ ರೋಹಿತ್
ಇತ್ತೀಚೆಗಷ್ಟೇ ಮುಕ್ತಾಯವಾಗಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಪದೇ ಪದೆ ತಾಳ್ಮೆ ಕಳೆದುಕೊಂಡಿರುವುದು ಕಂಡು ಬಂತು. ಮೊದಲಿಗೆ ಫೀಲ್ಡಿಂಗ್ ವೇಳೆ ಸಹ ಆಟಗಾರ ಯುಜುವೇಂದ್ರ ಚಾಹಲ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ರೋಹಿತ್ ನಂತರ ಭುವನೇಶ್ವರ್ ಕುಮಾರ್ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಕೈ ಚೆಲ್ಲಿದ ಸಂದರ್ಭದಲ್ಲಿ ಚೆಂಡನ್ನು ಕಾಲಿನಿಂದ ಒದ್ದು ಅಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಅಂತಿಮ ಪಂದ್ಯದಲ್ಲಿ ರನ್‌ಔಟ್ ಅವಕಾಶವನ್ನು ಕೈಚೆಲ್ಲಿದ ಇಶಾನ್ ಕಿಶನ್ ಮೇಲೆಯೂ ರೋಹಿತ್ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ರೋಹಿತ್- ಕೊಹ್ಲಿ ಬಗ್ಗೆ ರಾಜ್‌ಕುಮಾರ್ ಶರ್ಮಾ ಮಾತು
ಇನ್ನು ಇದೇ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೊತೆಯಾಗಿ ಕರ್ತವ್ಯವನ್ನು ನಿರ್ವಹಿಸುವುದನ್ನು ನೋಡಲು ಬಹಳ ಸಂತೋಷವಾಗುತ್ತದೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಹಿಂದೆ ವಿರಾಟ್ ಕೊಹ್ಲಿ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡಿದ್ದ ಸಂದರ್ಭದಲ್ಲಿಯೂ ಹಿಂದಿನ ನಾಯಕ ಎಂಎಸ್ ಧೋನಿ ಕೊಹ್ಲಿಗೆ ಸಲಹೆ ನೀಡುತ್ತಿದ್ದ ಸಂದರ್ಭವನ್ನು ಶರ್ಮಾ ಸ್ಮರಿಸಿಕೊಂಡಿದ್ದಾರೆ. ಭಾರತ ಈಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದ್ದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications