
ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಲ್ಲಿ ಒಳ್ಳೆಯ ಫುಟ್ಬಾಲ್ ಕೌಶಲವೂ ಇದೆ ಅನ್ನೋದು ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಕೊಹ್ಲಿಯ ಫ್ರೀ ಕಿಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿಯೂ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮತ್ತು ಫೇಸ್ಬುಕ್‌ನಲ್ಲಿ ಒಂದು ವಿಡಿಯೋ ಹಾಕಿಕೊಂಡಿದ್ದರು. 'ಆ್ಯಕ್ಸಿಡೆಂಟಲ್ ಕ್ರಾಸ್‌ಬಾರ್ ಚಾಲೆಂಜ್' ಎಂದು ತಲೆಬರಹ ನೀಡಲಾಗಿದ್ದ ಈ ವಿಡಿಯೋದಲ್ಲಿ ಕೊಹ್ಲಿ ಕೊಟ್ಟ ಫ್ರೀ ಕಿಕ್ ಗೋಲ್‌ಪೋಸ್ಟ್‌ನ ಕ್ರಾಸ್‌ಬಾರ್‌ಗೆ ಬಡಿದು ಹೊರ ಬೀಳುವ ಚಿತ್ರಣವಿತ್ತು.
ಕೊಹ್ಲಿಯ ಫ್ರೀ ಕಿಕ್ ಕೌಶಲ ಮೆಚ್ಚುಕೊಳ್ಳುವಂತಿದೆಯಾದರೂ ಸ್ವಲ್ಪದರಲ್ಲಿ ಗೋಲ್ ಮಿಸ್ ಆಗಿದ್ದು ವಿಡಿಯೋದಲ್ಲಿ ಕಾಣಿಸಿತ್ತು. ಗೋಲ್ ಮಿಸ್ ಆದಾಗ ಕೊಹ್ಲಿ ಕೂಡ ಮುಖಕ್ಕೆ ಕೈ ಅಡ್ಡ ಹಿಡಿದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಸುನಿಲ್ ಛೆಟ್ರಿ ಕೂಡ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿ ಹಾಕಿದ್ದ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಛೆಟ್ರಿ, 'ಎಲ್ಲಾ ಕೋಚಿಂಗ್ ಸೆಷನ್‌ಗಳಿಗೆ ನಾನು ಸಾಮೂಹಿಕ ಇನ್‌ವಾಯ್ಸ್ ಕಳುಹಿಸಬೇಕೇ ಅಥವಾ ನೀವು ನನಗೆ ಸುಲಭ ಕಂತುಗಳಲ್ಲಿ ಪಾವತಿಸಲು ಬಯಸುವಿರಾ, ಚಾಂಪಿಯನ್?' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.