ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಬೀಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮೂರನೇ ಪಂದ್ಯಕ್ಕೆ ಸಿದ್ಧತೆ ನಡೆಸಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಅಂಗಳ ಸಿದ್ಧವಾಗಿದ್ದು, ಆರ್‌ಸಿಬಿ ಪ್ರದರ್ಶನವನ್ನು ಕಣ್ಣು ತುಂಬಿ ಕೊಳ್ಳಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಮೈದಾನದತ್ತ ಆಗಮಿಸಲಿದ್ದಾರೆ.
ಈಗಾಗಲೇ ಉದ್ಘಾಟನಾ ಪಂದ್ಯವನ್ನು ಕೆಕೆಆರ್ ವಿರುದ್ಧ ಹಾಗೂ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಜಯ ಸಾಧಿಸಿರುವ ರಜತ್ ಪಟಿದಾರ್ ಮುಂದಾಳತ್ವದ ತಂಡ, ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಪ್ಲ್ಯಾನ್ ಹಾಕಿಕೊಂಡಿದೆ. ಈ ಬಾರಿಯ ಆರ್‌ಸಿಬಿ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲೆಬು ವಿರಾಟ್ ಕೊಹ್ಲಿ ಅವರ ಪ್ರದರ್ಶನ ಸಹ ಸ್ಥಿರವಾಗಿದೆ. ಕೆಕೆಆರ್ ವಿರುದ್ಧ ಅರ್ಧಶತಕ ಬಾರಿಸಿದ್ದ ವಿರಾಟ್, ಚೆನ್ನೈ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯ ನಡೆಯಲಿದೆ. ಈ ವೇಳೆ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ವಿರಾಟ್ ಕೊಹ್ಲಿ ಬೆಂಗಳೂರಿನ ಮೈದಾನದಲ್ಲಿ ಈ ವರೆಗೆ 89 ಪಂದ್ಯಗಳನ್ನು ಆಡಿದ್ದು, 40.53ರ ಸರಾಸರಿ ಹಾಗೂ 142.58ರ ಸ್ಟ್ರೈಕ್ ರೇಟ್‌ನಲ್ಲಿ 3040 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 4 ಶತಕ ಹಾಗೂ 22 ಅರ್ಧಶತಕಗಳು ಮೂಡಿ ಬಂದಿವೆ. ಅಲ್ಲದೆ ಇದೇ ವೇಳೆ 277 ಬೌಂಡರಿ, 128 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತದೆ.
ಗುಜರಾತ್ ಹಾಗೂ ಆರ್‌ಸಿಬಿ ನಡುವಣ ಈ ಹಿಂದೆ ಒಟ್ಟು ಐದು ಪಂದ್ಯಗಳು ನಡೆದಿದ್ದು, ಆರ್‌ಸಿಬಿ ಈ ವೇಳೆ ಮೂರು ಬಾರಿ ಜಯ ಸಾಧಿಸಿದೆ. ಇನ್ನು ಗುಜರಾತ್ ಟೈಟನ್ಸ್ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈ ಉಭಯ ತಂಡಗಳು ಮೈದಾನಕ್ಕೆ ಇಳಿದಾಗ 206 ರನ್ ಗರಿಷ್ಠ ಮೊತ್ತವಾಗಿತ್ತು.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 254 ಪಂದ್ಯಗಳನ್ನು ಆಡಿದ್ದು 38.91ರ ಸರಾಸರಿಯಲ್ಲಿ 8094 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 132.02 ಆಗಿದ್ದು, 8 ಶತಕ ಹಾಗೂ 56 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 711 ಬೌಂಡರಿ, 276 ಸಿಕ್ಸರ್‌ಗಳು ಸೇರಿವೆ. ಇದರಲ್ಲಿ ಈ ಆವೃತ್ತಿಯಲ್ಲಿ ಆಡಿರುವ 2 ಪಂದ್ಯಗಳ 90 ರನ್ ಸಹ ಸೇರಿಕೊಂಡಿವೆ.
ಆರ್‌ಸಿಬಿ ಆಡಿರುವ 2 ಪಂದ್ಯಗಳನ್ನು ಗೆದ್ದಿದ್ದು 4 ಅಂಕ ಗಳೊಂದಿಗೆ ಅಂಕ ಪಟ್ಟಿಯಲ್ಲೊ ಮೊದಲ ಸ್ಥಾನದಲ್ಲಿದೆ. ಇನ್ನು ಜಿಟಿ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಕಂಡಿದ್ದು 2 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.