ವಿರಾಟ್ ಕೊಹ್ಲಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಕಪಿಲ್ ದೇವ್: ಕೊಹ್ಲಿಗೆ ದಿಗ್ಗಜ ಆಟಗಾರನಿಂದ ಸಲಹೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಬಿಸಿಸಿಐ ಹಾಗೂ ವಿರಾಟ್ ಕೊಹ್ಲಿ ಬೇಡದ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಏಕದಿನ ನಾಯಕತ್ವ ಬದಲಾವಣೆಯೊಂದಿಗೆ ಆರಂಭವಾದ ಈ ವಿವಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಧ್ಯೆ ಬಿರುಕು ಉಂಟಾಗಿದೆ ಎಂದು ಸುದ್ದಿಯಾಗಿತ್ತು. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆಡಿದ ಕೆಲ ಮಾತುಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ನೀಡಿದ ಹೇಳಿಕೆಗೆ ತಿರುಗೇಟಿನಂತಿದೆ. ಅಲ್ಲದೆ ಏಕದಿನ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಸೂಕ್ತ ರೀತಿಯಲ್ಲಿ ಸಂವಹನ ನಡೆಸಲಿಲ್ಲ ಎಂಬ ಅಂಶವನ್ನು ಕೂಡ ಕೊಹ್ಲಿ ಈ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
ಈ ಮಾಧ್ಯಮಗೋಷ್ಠಿಯ ಬಳಿಕ ಬಿಸಿಸಿಐ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ವಿರಾಟ್ ಕೊಹ್ಲಿ ಬಹಿರಂಗವಾಗಿ ಆಡಿದ ಕೆಲ ಮಾತುಗಳಿಗೆ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಕಪಿಲ್‌ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಗೆ ಅವರು ಕೆಲ ಸಲಹೆಗಳನ್ನು ಕೂಡ ನೀಡಿದ್ದಾರೆ.

ವಿವಾದದ ಆರಂಭ
ಕೆಲ ದಿನಗಳ ಹಿಂದೆಯಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಏಕದಿನ ತಂಡದ ಬದಲಾವಣೆ ಬಗ್ಗೆ ಎದ್ದ ವಿವಾದದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿರಾಟ್ ಕೊಹ್ಲಿಗೆ ಕಟಿ20 ನಾಯಕತ್ವದಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದೆವು. ಆದರೆ ಅದಕ್ಕೆ ಅವರು ಒಪ್ಪಿಕೊಂಡಿರಲಿಲ್ಲ ಎಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈ ಮಾಧ್ಯಮಗೋಷ್ಠಿಯಲ್ಲಿ ತಾನು ಟಿ20 ನಾಯಕತ್ವ ತ್ಯಜಿಸುವ ಸಂದರ್ಭದಲ್ಲಿ ಯಾರು ಕೂಡ ನನಗೆ ನಾಯಕನಾಗಿ ಮುಂದುವರಿಯುವಂತೆ ಒತ್ತಾಯಿಸಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕೊಹ್ಲಿಯ ಈ ಹೇಳಿಕೆಯಿಂದ ಏಕದಿನ ನಾಯಕತ್ವ ರೋಹಿತ್ ಶರ್ಮಾಗೆ ನೀಡಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಆಡಳಿತ ಮಂಡಳಿ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಿದೆ ಎಂಬುದು ಬಹಿರಂಗವಾಗಿದೆ.

ಪ್ರವಾಸದ ಮೇಲೆ ಗಮನ ಹರಿಸಿ
ಆದರೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಭಾರತ ತಂಡ ಮಹತ್ವದ ಪ್ರವಾಸಕ್ಕೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯಿಂದ ಇಂತಾ ಹೇಳಿಕೆ ಬಂದಿರುವ ಕಾರಣಕ್ಕ ಅವರನ್ನು ಟೀಕಿಸಿದ್ದಾರೆ. ಅಲ್ಲದೆ ಪ್ರವಾಸದ ಮೇಲೆ ಗಮನಹರಿಸುವಂತೆ ಅವರು ಸಲಹೆ ನೀಡಿದ್ದಾರೆ.
"ಇಂತಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಳ ಮೇಲೆ ಬೊಟ್ಟು ಮಾಡಿ ಹೇಳುವುದು ಸರಿಯಾದುದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಸಮೀಪಿಸುತ್ತಿದೆ. ದಯವಿಟ್ಟು ಆ ಪ್ರವಾಸದ ಮೇಲೆ ಗಮನಹರಿಸಿ" ಎಂದಿದ್ದಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ದೇವ್.

ಈ ರೀತಿಯ ವರ್ತನೆ ಸರಿಯಲ್ಲ ಎಂಬ ಕಪಿಲ್
ಎಬಿಪಿ ನ್ಯೂಸ್ ಜೊತೆಗೆ ಮಾತನಾಡಿದ ಕಪಿಲ್‌ದೇವ್ "ಮಂಡಳಿಯ ಅಧ್ಯಕ್ಷ ಎಂಬುದು ಪ್ರಮುಖವಾದ ಸ್ಥಾನ. ಭಾರತೀಯ ಕ್ರಿಕೆಟ್ ತಮಡದ ನಾಯಕನ ಹುದ್ದೆ ಕೂಡ ದೊಡ್ಡ ಸ್ಥಾನವೆ. ಆದರೆ ಪರಸ್ಪರರ ನಡುವೆ ಸಾರ್ವಜನಿಕವಾಗಿ ಬಿಟ್ಟು ಮಾಡಿಕೊಂಡು ಮಾತನಾಡುವುದು ಉತ್ತಮವಾದ ಸಂಗತಿಯಲ್ಲ. ಅದು ಸೌರವ್ ಗಂಗೂಲಿಯಾಗಿರಹುದು ಅಥವಾ ವಿರಾಟ್ ಕೊಹ್ಲಿಯಾಗಿರಬಹುದು ಅದು ಸರಿಯಾದ ವರ್ತನೆಯಲ್ಲ" ಎಂದಿದ್ದಾರೆ ಮಾಜಿ ನಾಯಕ ಕಪಿಲ್ ದೇವ್.

ದೇಶ ಮೊದಲು ಎಂಬುದನ್ನು ಅರ್ಥ ಮಾಡಿಕೊಳ್ಳಿ
ಈ ಸಂದರ್ಭದಲ್ಲಿ ಕಪಿಲ್‌ದೇವ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದುಕೊಂಡು ದೇಶ ಮೊದಲು ಎಂದು ಯೋಚಿಸಬೇಕು ಎಂದು ವಿರಾಟ್ ಕೊಹ್ಲಿಗೆ ಕಪಿಲ್‌ದೇವ್ ಸಲಹೆ ನೀಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಬಹಿರಂಗವಾಗಿ ನೀಡಿದ ಕೆಲ ಹೇಳಿಕೆಗಳಿಗೆ ಮಾಹಿ ನಾಯಕ ಕಪಿಲ್‌ದೇವ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ ಟೀಮ್ ಇಂಡಿಯಾ
ಇನ್ನು ವಿರಾಟ್ ಕೊಹ್ಲಿ ಈ ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ತಮ್ಮ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ ಜನವರಿಯಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧಧ ಏಕದಿನ ಸರಣಿಗೂ ತಾನು ಲಭ್ಯವಿರುವುದಾಗಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಇನ್ನು ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುವ ಸಲುವಾಗಿ ಭಾರತೀಯ ಕ್ರಿಕೆಟ್ ತಂಡ ಇಂದು(ಗುರುವಾರ) ಮುಂಬೈನಿಂದ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications