ಟೀಮ್ ಇಂಡಿಯಾದಲ್ಲಿ ಆ ಅದ್ಭುತ ಟ್ರೆಂಡ್ ಹುಟ್ಟುಹಾಕಿದ್ದೇ ಕೊಹ್ಲಿ ಎಂದು ಹೊಗಳಿದ ದ್ರಾವಿಡ್

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿಯೂ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ. ಹಾಗೂ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ಮತ್ತು ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಹರಿಣಗಳ ನೆಲದಲ್ಲಿಯೂ ಕೂಡ ತನ್ನ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ತವಕದಲ್ಲಿದೆ.
ಇನ್ನು ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕವಾದ ನಂತರ ಭಾರತ ಕೈಗೊಂಡಿರುವ ಚೊಚ್ಚಲ ವಿದೇಶಿ ಪ್ರವಾಸ ಇದಾಗಿದ್ದು ದಕ್ಷಿಣ ಆಫ್ರಿಕಾ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸುವ ಸಾಧ್ಯತೆಗಳಿವೆ. ನ್ಯೂಜಿಲೆಂಡ್ ವಿರುದ್ಧದ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾದ ಗೆಲುವಿನೊಂದಿಗೆ ತನ್ನ ಹೆಡ್ ಕೋಚ್ ವೃತ್ತಿಯಲ್ಲಿ ಶುಭಾರಂಭ ಮಾಡಿರುವ ರಾಹುಲ್ ದ್ರಾವಿಡ್ ಇದೀಗ ಟೀಮ್ ಇಂಡಿಯಾ ಆಟಗಾರರ ಜೊತೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಆಟಗಾರರಿಗೆ ಕಠಿಣ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಜತೆ ಹೆಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಭಾಗವಹಿಸಿರುವ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಟಿವಿ ಸಂದರ್ಶನದಲ್ಲಿ ಮಾತನಾಡಿ ವಿರಾಟ್ ಕೊಹ್ಲಿ ಕುರಿತು ದೊಡ್ಡ ದೊಡ್ಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗೂ ವಿರಾಟ್ ಕೊಹ್ಲಿ ಜೊತೆ ತಾವು ಕಣಕ್ಕಿಳಿದು ಬ್ಯಾಟಿಂಗ್ ಮಾಡಿದ್ದ ದಿನಗಳ ಕುರಿತು ಕೂಡ ಮೆಲುಕು ಹಾಕಿರುವ ರಾಹುಲ್ ದ್ರಾವಿಡ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾಗ ನಾನೂ ಕೂಡ ತಂಡದಲ್ಲಿದ್ದೆ ಎಂದ ರಾಹುಲ್ ದ್ರಾವಿಡ್
ವಿರಾಟ್ ಕೊಹ್ಲಿ ಕುರಿತು ವಿಶೇಷವಾಗಿ ಮಾತನಾಡಿರುವ ರಾಹುಲ್ ದ್ರಾವಿಡ್ ಕೊಹ್ಲಿ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಆಡಿದ್ದನ್ನು ಕೂಡ ನೆನಪಿಸಿಕೊಂಡಿದ್ದಾರೆ. ಹೌದು, ಜಮೈಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2011ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ಕುರಿತಾಗಿ ಮಾತನಾಡಿರುವ ರಾಹುಲ್ ದ್ರಾವಿಡ್ "ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗ ನಾನೂ ಕೂಡ ತಂಡದಲ್ಲಿದ್ದೆ. ಆ ಪಂದ್ಯದಲ್ಲಿ ನಾನು ಕೂಡ ಆತನ ಜತೆ ಬ್ಯಾಟಿಂಗ್ ಮಾಡಿದ್ದೆ" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಆತನ ಬೆಳವಣಿಗೆ ಅಮೋಘವಾದದ್ದು
ಇನ್ನು ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಬೆಳವಣಿಗೆ ಕುರಿತು ವಿಶೇಷವಾಗಿ ಮಾತನಾಡಿರುವ ರಾಹುಲ್ ದ್ರಾವಿಡ್ ಕಳೆದ ಹತ್ತು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಓರ್ವ ಕ್ರಿಕೆಟಿಗನಾಗಿ ಅಮೋಘವಾಗಿ ಬೆಳೆದಿದ್ದಾರೆ ಎಂದು ಕೊಂಡಾಡಿದ್ದಾರೆ. ಅದರಲ್ಲಿಯೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಫಿಟ್‌ನೆಸ್ ಟ್ರೆಂಡ್ ಹುಟ್ಟುಹಾಕಿದರು, ತಂಡವನ್ನು ಅವರು ಮುನ್ನಡೆಸಿದ ರೀತಿ ನಿಜಕ್ಕೂ ಅತ್ಯದ್ಭುತವಾಗಿದ್ದು ಅವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ರಾಹುಲ್ ದ್ರಾವಿಡ್ ಹೇಳಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಉತ್ತಮ ಆಟವನ್ನು ಆಡುವುದು ಬಲು ಕಷ್ಟ
ಇನ್ನು ದಕ್ಷಿಣ ಆಫ್ರಿಕಾ ಪಿಚ್‌ಗಳ ಕುರಿತು ಮಾತನಾಡಿರುವ ರಾಹುಲ್ ಇಲ್ಲಿನ ಕ್ರೀಡಾಂಗಣಗಳು ಸವಾಲಿನಿಂದ ಕೂಡಿರಲಿದ್ದು ಉತ್ತಮ ಕ್ರಿಕೆಟ್ ಆಡುವುದು ಸುಲಭದ ಮಾತಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿರುವ ಅನುಭವವನ್ನು ಹೊಂದಿರುವ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಈ ಬಾರಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳು ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications