ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾದವು.
ರೋಚಕ ಆರಂಭಿಕ ಪಂದ್ಯದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳು ಸಿಡಿಯುತ್ತಿದ್ದವು. ಇದು ಪಂದ್ಯಾವಳಿಯು ಬೌಂಡರಿಗಳನ್ನು ಬಾರಿಸುವ ಪರಿಣತಿ ಹೊಂದಿರುವ ಸ್ಫೋಟಕ ಬ್ಯಾಟರ್‌ಗಳನ್ನು ಪರಿಚಯಿಸುತ್ತದೆ.

2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಉಭಯ ತಂಡಗಳು ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಪರಸ್ಪರ ಸೆಣಸಾಡಲಿವೆ.
ಇದೇ ವೇಳೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿದ್ದು, ಟೂರ್ನಿಯಲ್ಲಿ ಹಲವು ಪ್ರಮುಖ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗಾಗಲೇ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಅಗ್ರಸ್ಥಾನದಲ್ಲಿದ್ದಾರೆ.
ಇದೀಗ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿಗಳ ಬಾರಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಲು ಅವರು ಸಜ್ಜಾಗಿದ್ದಾರೆ. ಶ್ರೀಲಂಕಾದ ಮಾಜಿ ಆರಂಭಿಕ ಕ್ರಿಕೆಟಿಗ ತಮ್ಮ ಟಿ20 ವಿಶ್ವಕಪ್ ವೃತ್ತಿಜೀವನದ 31 ಇನ್ನಿಂಗ್ಸ್‌ಗಳಲ್ಲಿ 111 ಬೌಂಡರಿಗಳನ್ನು ಸಿಡಿಸಿದ್ದಾರೆ.

ಆದಾಗ್ಯೂ, ಮಹೇಲಾ ಜಯವರ್ಧನೆ ದಾಖಲೆ ಹಿಂದಿಕ್ಕಲು ಟೀಮ್ ಇಂಡಿಯಾ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ ಸಜ್ಜಾಗಿರುವುದರಿಂದ ಅಗ್ರಸ್ಥಾನದಲ್ಲಿರುವ ಶ್ರೀಲಂಕಾ ಮಾಜಿ ಆಟಗಾರನ ದಾಖಲೆ ಅಪಾಯದಲ್ಲಿದೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ಕಳೆದ ಐದು ಆವೃತ್ತಿಗಳಲ್ಲಿ ಕೇವಲ 25 ಇನ್ನಿಂಗ್ಸ್‌ಗಳಲ್ಲಿ ಈಗಾಗಲೇ 103 ಬೌಂಡರಿಗಳನ್ನು ಸಿಡಿಸಿದ್ದಾರೆ.
ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ 34 ಪಂದ್ಯಗಳ ಟಿ20 ವಿಶ್ವಕಪ್ ವೃತ್ತಿಜೀವನದಲ್ಲಿ 101 ಬಾರಿ ಬೌಂಡರಿ ಗೆರೆ ದಾಟಿಸಿದ್ದಾರೆ.
ಇದುವರೆಗಿನ ಟಿ20 ವಿಶ್ವಕಪ್‌ನ ಪ್ರತಿ ಆವೃತ್ತಿಯಲ್ಲಿ ಭಾಗವಹಿಸಿರುವ ಭಾರತದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಹೆಚ್ಚು ಬೌಂಡರಿ ಬಾರಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಕಳೆದ 17 ವರ್ಷಗಳ ತಮ್ಮ 36 ಇನ್ನಿಂಗ್ಸ್ ವೃತ್ತಿಜೀವನದಲ್ಲಿ 91 ಬೌಂಡರಿಗಳನ್ನು ಗಳಿಸಿದ್ದಾರೆ.
1) ಮಹೇಲಾ ಜಯವರ್ಧನೆ (ಶ್ರೀಲಂಕಾ) - 31 ಇನ್ನಿಂಗ್ಸ್, 111 ಬೌಂಡರಿ, 25 ಸಿಕ್ಸರ್
2) ವಿರಾಟ್ ಕೊಹ್ಲಿ (ಭಾರತ) - 27 ಇನ್ನಿಂಗ್ಸ್, 103 ಬೌಂಡರಿ, 28 ಸಿಕ್ಸರ್
3) ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ) - 35 ಇನ್ನಿಂಗ್ಸ್, 101 ಬೌಂಡರಿ, 20 ಸಿಕ್ಸರ್
4) ರೋಹಿತ್ ಶರ್ಮಾ (ಭಾರತ) - 36 ಇನ್ನಿಂಗ್ಸ್, 91 ಬೌಂಡರಿ, 35 ಸಿಕ್ಸರ್
5) ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 34 ಇನ್ನಿಂಗ್ಸ್, 86 ಬೌಂಡರಿ, 31 ಸಿಕ್ಸರ್