ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 235 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ ಆರಂಭಿಸಿದ ಭಾರತ 4 ವಿಕೆಟ್‌ಗೆ 86 ರನ್ ಸೇರಿಸಿದೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರರು ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ತವರಿನಲ್ಲಿ ರೋಹಿತ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿ 18 ರನ್‌ಗಳಿಗೆ ಔಟ್ ಆದರು. ಇನ್ನೋರ್ವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 30 ರನ್‌ಗಳಿಸಿ ಔಟ್ ಆದರು. ಅಲ್ಲದೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ 4 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ನ್ಯೂಜಿಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಅಂಗಳಕ್ಕೆ ಇಳಿದ ವಿರಾಟ್ ದಾಖಲೆ ನಿರ್ಮಿಸಿದರು. ಕೊಹ್ಲಿ 4 ರನ್ ಗಳಿಸಿ ಔಟಾದರೂ, ಇದರ ಹೊರತಾಗಿಯೂ 2 ದೊಡ್ಡ ದಾಖಲೆಗಳನ್ನು ತಮ್ಮ ಹೆಸರಲ್ಲಿ ಮಾಡಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 600 ಇನ್ನಿಂಗ್ಸ್‌ಗಳನ್ನು ಪೂರೈಸಿದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಇನ್ನಿಂಗ್ಸ್‌ಗಳನ್ನು ಆಡಿದ ಮೊದಲ ಸಕ್ರಿಯ ಕ್ರಿಕೆಟಿಗ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
600 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನು ಆಡಿದ ದಾಖಲೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ಕೊಹ್ಲಿ. ಇದಕ್ಕೂ ಮುನ್ನ ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್ ಮಾತ್ರ ಮಾಡಿದ್ದರು. ಅಂದಹಾಗೆ ರಾಹುಲ್ ದ್ರಾವಿಡ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 599 ಇನಿಂಗ್ಸ್‌ಗಳಲ್ಲಿ ಭಾರತ ತಂಡದ ಪರ ಆಡಿದ್ದರು. ಆದರೆ ಏಷ್ಯಾ ತಂಡದ ಪರವಾಗಿಯೂ ಇವರು ಆಡಿದ್ದರಿಂದ ಅವರು ಸಹ 600 ಇನಿಂಗ್ಸ್‌ಗಳ ನಂಬರ್ ದಾಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಇನ್ನಿಂಗ್ಸ್‌ಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದಾಗಿದೆ. ಈ ಮೂಲಕ ವಿರಾಟ್, ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದರು. ಈ ಹಿಂದೆ ಸಚಿನ್ 600 ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದರು.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಸ್ಥಿರ ಬ್ಯಾಟಿಂಗ್ ನೀಡುವ ವಿಶ್ವಾಸವಿದೆ. ಈ ಮೂಲಕ ವಿರಾಟ್, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಲಯಕ್ಕೆ ಮರಳುವ ಅವಶ್ಯಕತೆ ಇದೆ. ನವೆಂಬರ್‌ನಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಸರಣಿಗೂ ಮುನ್ನ ಚೇಸಿಂಗ್ ಸ್ಟಾರ್ ಫಾರ್ಮ್‌ಗೆ ಮರಳುವುದು ಅನಿವಾರ್ಯ. ಅಂದಾಗ ಮಾತ್ರ ಆಸ್ಟ್ರೇಲಿಯಾದಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ಕನಸು ನನಸಾಗುತ್ತದೆ.