
ನವದೆಹಲಿ, ಜುಲೈ 26: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಅನ್ನೋದನ್ನು ನಾವು ಅಲ್ಲಿಲ್ಲಿ ನೋಡಿದ್ದೇವೆ. ರನ್ ಮೆಷೀನ್ ಕೊಹ್ಲಿ ಗುರುವಾರ (ಜುಲೈ 25) ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋದಲ್ಲೂ ಕೊಹ್ಲಿ ಸ್ಟೆಪ್ ಹಾಕಿದ್ದಾರೆ.
ಕೊಹ್ಲಿ ಹಾಕಿಕೊಂಡಿರುವ ವಿಡಿಯೋ ಸ್ಪೋರ್ಟ್ಸ್ ಬ್ರ್ಯಾಂಡ್ ಪೂಮಾದ ಪ್ರಚಾರಕ್ಕೆ ಸಂಬಂಧಿಸಿದ್ದು. ವಿಡಿಯೋದ ಜೊತೆಗೆ ಕೊಹ್ಲಿ, 'ಸಕಾರಾತ್ಮಕತೆ ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ನಿಮ್ಮ ಆಯ್ಕೆಯು ನಿಮ್ಮ ಫಲಿತಾಂಶವನ್ನು ವ್ಯಾಖ್ಯಾನಿಸುತ್ತದೆ,' ಎಂದು ಬರೆದುಕೊಂಡಿದ್ದರು.
ಕೊಹ್ಲಿ ವಿಡಿಯೋ ಪೋಸ್ಟ್ ಮಾಡುತ್ತಲೇ ಇದಕ್ಕೆ ಸಾಲುಸಾಲು ಕಾಮೆಂಟ್‌ಗಳೂ ಬಂದಿವೆ. ಈ ಕಾಮೆಂಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಮಾಜಿ ಆಟಗಾರ, ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯೆ ಹೆಚ್ಚು ಗಮನ ಸೆಳೆಯುತ್ತಿದೆ.
ಕಾಮೆಂಟ್‌ನಲ್ಲಿ ಎಬಿಡಿ ಒಂದೆಡೆ, 'ಮೂವ್ಸ್' ಎಂದು ಬರೆದುಕೊಂಡಿದ್ದರೆ, ಇನ್ನೊಂದೆಡೆ, 'ನಾನೂ ಹೀಗೆ (ಡ್ಯಾನ್ಸ್) ಮಾಡೋದನ್ನು ಊಹಿಸಿ' ಎಂದು ಬರೆದಿದ್ದಾರೆ. ಇನ್ಸ್‌ಸ್ಟಾಗ್ರಾಮ್ ಸಂಭಾವನೆಗಾಗಿ ಇತ್ತೀಚೆಗೆ ಕೊಹ್ಲಿ ಸಿರಿವಂತರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಬ್ರ್ಯಾಂಡ್‌ಗೆ ಸಂಬಂಧಿಸಿ ಕೊಹ್ಲಿ ಪ್ರತಿ ಪೋಸ್ಟ್‌ಗೆ $196,000 (ಸುಮಾರು 1,35,66,749 ರೂ.) ವಿಧಿಸುತ್ತಿದ್ದಾರೆ.