ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸದಿದ್ದರೆ ಮಂಡಳಿಯೇ ಕಿತ್ತು ಹಾಕ್ತಿತ್ತಾ?: ಕುತೂಹಲ ಕೆರಳಿಸಿದ ಮಂಜ್ರೇಕರ್ ಮಾತು!

ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಕ್ಕಿಳಿಯುವ ನಿರ್ಧಾರವನ್ನು ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸೀಮಿತ ಓವರ್‌ಗಳ ನಾಯಕತ್ವ ತೊರೆದ ಬಳಿಕ ಟೆಸ್ಟ್ ಮಾದರಿಯ ನಾಯಕತ್ವದಿಂದಲೂ ವಿರಾಟ್ ಕೊಹ್ಲಿ ಕೆಳಕ್ಕಿಳಿಯಲು ನಿರ್ಧರಿಸಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ನೀಡಿರುವ ಹೇಳಿಕೆಯೊಂದು ತೀವ್ರ ಕುತೂಹಲ ಮೂಡಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ ಸರಣಿಯ ಸೋಲಿನ ಬಳಿಕ ವಿರಾಟ್ ಕೊಹ್ಲಿ ಶನಿವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಟೆಸ್ಟ್ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ತಿಳಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಟೀಮ್ ಇಡಿಯಾವನ್ನು ಮುನ್ನಡೆಸಿದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಮುನ್ನಡೆಸಲು ಸಾಧ್ಯವಾಗದಿರಬಹುದು ಎಂಬ ಭಾವನೆಯನ್ನು ವ್ಯಕ್ತಪಡಿಸಿ ನಾಯಕತ್ವವನ್ನು ತೊರೆಯಲು ನಿರ್ಧರಿಸಿರುವುದಾಗಿ ಕೊಹ್ಲಿ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಇನ್ನು ಬಿಸಿಸಿಐ ಕೂಡ ವಿರಾಟ್ ಕೊಹ್ಲಿಯ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದು ಇದು ವಿರಾಟ್ ಕೊಹ್ಲಿಯ ವೈಯಕ್ತಿಕವಾದ ನಿರ್ಧಾರವಾಗಿದ್ದು ಈ ಬಗ್ಗೆ ಯಾರೂ ಕೂಡ ಅವರಿಗೆ ಒತ್ತಡವನ್ನು ಹೇರಿಲ್ಲ ಎಂದಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ
ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ನಾಯಕತ್ವಕ್ಕೆ ರಾಜೀನಾಮೆ ನಿಡಿದ ಬಳಿಕ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ. "ಅತ್ಯಂತ ಕಡಿಮೆ ಅವಧಿಯಲ್ಲಿ ಒಂದರ ನಂತರ ಮತ್ತೊಂದರಂತೆ ನಾಯಕತ್ವ ತ್ಯಜಿಸಿದ್ದಾರೆ. ವೈಟ್-ಬಾಲ್ ನಾಯಕತ್ವ ಮತ್ತು ಐಪಿಎಲ್ ನಾಯಕತ್ವವನ್ನೂ ಬಿಟ್ಟುಕೊಟ್ಟಿದ್ದು ಕೂಡ ಅನಿರೀಕ್ಷಿತವಾಗಿತ್ತು. ಈ ಮೂರು ಪ್ರಮುಖ ಸ್ಥಾನಗಳಿಗೆ ನೀಡಿದ ರಾಜೀನಾಮೆಗಳು ಒಂದರ ನಂತರ ಒಂದರಂತೆ ಬಂದಿವೆ. ಇದು ಕುತೂಹಲಕಾರಿಯಾಗಿದೆ" ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಾಯಕತ್ವದಿಂದ ಕೆಳಕ್ಕಿಳಿಸುವ ಅವಕಾಶ ನೀಡದಿರಲು ಬಯಸಿದರು!
ಇನ್ನು ಸಂಜಯ್ ಮಂಜ್ರೇಕರ್ ಮುಂದುವರಿದು ಕ್ರಿಕೆಟ್ ಮಂಡಳಿ ತನ್ನನ್ನು ನಾಯಕತ್ವದಿಂದ ಕಿತ್ತು ಹಾಕುವ ಅವಕಾಶವನ್ನು ನೀಡದಿರಲು ವಿರಾಟ್ ಕೊಹ್ಲಿ ಬಯಸಿದ್ದರು. ಟೆಸ್ಟ್ ನಾಯಕತ್ವ ಹುದ್ದೆಗೆ ಕೂಡ ಅಪಾಯವಿದೆ ಎಂಬುದನ್ನು ಅರಿತ ವಿರಾಟ್ ಕೊಹ್ಲಿ ಅದರಿಂದ ಹೊರಗೆ ಬರುವ ನಿರ್ಧಾರವನ್ನು ತೆಗೆದುಕೊಂಡಿರಬಹುದು" ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಂಜ್ರೇಕರ್ ಆಡಿದ ಈ ಮಾತು ಕುತೂಹಲ ಮೂಡಿಸಿದೆ.

ಕೊಹ್ಲಿ ನಾಯಕನಾಗಿ ಸಾಧನೆ
2014ರ ಅಂತ್ಯದಲ್ಲಿ ಟೆಸ್ಟ್ ಮಾದರಿಯಿಂದ ಎಂಎಸ್ ಧೋನಿ ನಿವೃತ್ತಿಯನ್ನು ಪಡೆದುಕೊಂಡ ಬಳಿಕ ಟೆಸ್ಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದರು. ಅದಾದ ಬಳಿಕ 68 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಇದರಲ್ಲಿ 40 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಇದು ಭಾರತೀಯ ನಾಯಕನೊಬ್ಬ ಟೆಸ್ಟ್ ಮಾದರಿಯನ್ನು ಗೆದ್ದ ಅತಿ ಹೆಚ್ಚಿನ ಪಂದ್ಯ ಎಂಬುದು ದಾಖಲೆಯಾಗಿದೆ. ಅಲ್ಲದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಪ್ರಥಮ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು.

ಯಾರಾಗಲಿದ್ದಾರೆ ಟೀಮ್ ಇಂಡಿಯಾ ಟೆಸ್ಟ್ ನಾಯಕ?
ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರುವ ಕಾರಣ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದ ರೇಸ್‌ನಲ್ಲಿ ಪ್ರಮುಖವಾಗಿ ಮೂರು ಹೆಸರುಗಳು ಬಲವಾಗಿ ಕೇಳಿ ಬರುತ್ತಿದೆ. ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಹೆಸರು ಸಹಜವಾಗಿಯೇ ಚರ್ಚೆಯಲ್ಲಿದ್ದರೆ ದಕ್ಷಿಣ ಆಪ್ರಿಕಾ ಪ್ರವಾಸದಲ್ಲಿ ಭಾರತೀಯ ತಂಡದ ಉಪನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡ ಕೆಎಲ್ ರಾಹುಲ್ ಕೂಡ ಭಾರತೀಯ ತಂಡದ ನಾಯಕನ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಯುವ ಆಟಗಾರ ರಿಷಭ್ ಪಂತ್ ಹೆಸರು ಕೂಡ ಈ ರೇಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕುತೂಹಲ ಕೆರಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications