ಚೆನ್ನೈ: ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ನಡೆದಿಯಲಿದೆ. ಗುರುವಾರದಿಂದ ಆರಂಭವಾಗುವ ಈ ಪಂದ್ಯದಲ್ಲಿ ಹಲವು ಆಟಗಾರರು ದಾಖಲೆಯ ಪುಟ ಸೇರುವ ಕನಸು ಹೊಂದಿದ್ದಾರೆ. ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಹ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ.
ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಬಳಿಕ ವಿರಾಟ್ ಟೆಸ್ಟ್ ಪಂದ್ಯ ಆಡಿಲ್ಲ. ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಿಂದ ಇವರು ಹೊರಗುಳಿದಿದ್ದರು. ಕೌಂಟುಬಿಕ ಕಾರಣಗಳನ್ನು ನೀಡಿದ್ದ ವಿರಾಟ್ ಸರಣಿಯಿಂದ ಹೊರಗುಳಿದಿದ್ದರು. ಸುಮಾರು 37 ವಾರಗಳ ಬಳಿಕ ವಿರಾಟ್ ಮತ್ತೆ ವೈಟ್ ಜೆರ್ಸಿಯಲ್ಲಿ ಕಂಗೊಳಿಸಲಿದ್ದಾರೆ. ಈ ವೇಳೆ ವಿರಾಟ್ ಹಲವು ದಾಖಲೆಯನ್ನು ನಿರ್ಮಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಬ್ಯಾಟ್ ಮಾಡಲು ಅಂಗಳಕ್ಕೆ ಇಳಿಯುತ್ತಿದ್ದಂತೆ, ಈ ದಾಖಲೆಯ ಮೇಲೆ ಕಣ್ಣು ನೆಟ್ಟಿರಲಿದೆ. ಅಂದಹಾಗೆ ಈ ಬಾರಿ ವಿರಾಟ್ ಅರ್ಧಶತಕ ಹಾಗೂ ಶತಕಗಳಿಂದ ದಾಖಲೆಯ ಪುಟ ಸೇರುತ್ತಿಲ್ಲ. ಬದಲಿಗೆ ಅವರು ಬೌಂಡರಿ ಬಾರಿಸುವ ಮೂಲಕ ಸಾಧನೆ ಮಾಡುವ ತುದಿಗಾಲಿನಲ್ಲಿ ನಿಂತಿದ್ದಾರೆ.
ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ 9 ಬೌಂಡರಿಗಳನ್ನು ಬಾರಿಸಿದರೆ, ಅವರು ಸಾವಿರ ಕ್ಲಬ್‌ಗೆ ಸೇರುತ್ತಾರೆ. ಈ ಮೂಲಕ ಈ ಕ್ಲಬ್ ಸೇರಲಿರುವ ಭಾರತದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೊದಲು ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್ (2058), ರಾಹುಲ್ ದ್ರಾವಿಡ್ (1654), ವೀರೇಂದ್ರ ಸೆಹ್ವಾಗ್ (1233), ವಿವಿಎಸ್ ಲಕ್ಷ್ಮಣ್ (1135), ಸುನಿಲ್ ಗವಾಸ್ಕರ್ (1016) ಮಾಡಿದ್ದಾರೆ.

ವಿರಾಟ್ ಕೊಹ್ಲಿ 9 ಬೌಂಡರಿಗಳನ್ನು ಬಾರಿಸಿದ ತಕ್ಷಣ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ಬೌಂಡರಿಗಳನ್ನು ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಇದ್ದಾರೆ. ಇವರು ಟೆಸ್ಟ್‌ನಲ್ಲಿ 2058 ಬೌಂಡರಿಗಳನ್ನು ಬಾರಿಸಿದ್ದಾರೆ.
ಕೊಹ್ಲಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ರನ್‌ಗಳ ಗಡಿ ಮುಟ್ಟುವ ಅವಕಾಶವೂ ಕೊಹ್ಲಿಗಿದೆ. ಇದಕ್ಕಾಗಿ ಅವರಿಗೆ ಕೇವಲ 58 ರನ್‌ಗಳ ಅಗತ್ಯವಿದೆ. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 9 ಸಾವಿರ ರನ್‌ಗಳ ದಾಟುವ ಸನಿಹದಲ್ಲಿ ನಿಂತಿದ್ದಾರೆ. ಇವರು ಈ ಸರಣಿಯಲ್ಲಿ 152 ರನ್‌ಗಳನ್ನು ಪೂರ್ಣಗೊಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಕೇವಲ 3 ಭಾರತೀಯ ಬ್ಯಾಟ್ಸ್‌ಮನ್‌ಗಳು ಮಾತ್ರ 9000 ರನ್‌ಗಳ ಗಡಿಯನ್ನು ದಾಟಿದ್ದಾರೆ. ಈ ಪೈಕಿ ಸಚಿನ್ ತೆಂಡೂಲ್ಕರ್ 15921 ರನ್, ರಾಹುಲ್ ದ್ರಾವಿಡ್ 13288 ರನ್, ಸುನಿಲ್ ಗವಾಸ್ಕರ್ 10122 ರನ್ ಸಿಡಿಸಿದ್ದಾರೆ.