Virat Kohli Test Debut: ಈ ದಿನ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ; ಈವರೆಗಿನ ದಾಖಲೆ ಏನು?
ಜೂನ್ 20, 2011ರಂದು, ಅಂದರೆ ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು. ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ರೆಡ್-ಬಾಲ್ ಆಟಕ್ಕೆ ಪ್ರವೇಶ ಮಾಡಿದರು.
ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆ ಪಂದ್ಯದಲ್ಲಿ ಕೇವಲ 19 ರನ್ ಗಳಿಸುವಲ್ಲಿ ಯಶಸ್ವಿಯಾದರು.

ವೆಸ್ಟ್ ಇಂಡೀಸ್ ವಿರುದ್ಧ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು. ಫಿಡೆಲ್ ಎಡ್ವರ್ಡ್ಸ್ ಬೌಲಿಂಗ್‌ನಲ್ಲಿ ಔಟಾಗಿ ಪೆವಿಲಿಯನ್ ಸೇರಿದರು.
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 54 ಎಸೆತಗಳನ್ನು ಎದುರಿಸಿ 15 ರನ್ ಗಳಿಸಿ, ಮತ್ತೆ ಫಿಡೆಲ್ ಎಡ್ವರ್ಡ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆದರೂ, ಅಂತಿಮವಾಗಿ ಭಾರತ ತಂಡ 63 ರನ್‌ಗಳ ಅಂತರದಿಂದ ಗೆಲವು ಸಾಧಿಸಿತ್ತು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ.

2011ರ ಜೂನ್ 20ರಂದು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಅವರು ಬ್ಯಾಟ್ಸ್‌ಮನ್ ಮತ್ತು ನಾಯಕರಾಗಿ ಭಾರತೀಯ ಟೆಸ್ಟ್ ಕ್ರಿಕೆಟ್‌ನ ಅದೃಷ್ಟವನ್ನು ಬದಲಾಯಿಸಿದರು. ಕೊಹ್ಲಿ ಇಲ್ಲಿಯವರೆಗೆ 109 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 48.72ರ ಸರಾಸರಿಯಲ್ಲಿ 28 ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
2019ರಲ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ 254 ರನ್ ಗಳಿಸಿದರು ಮತ್ತು ಅದು ಈವರೆಗಿನ ಅವರ ಗರಿಷ್ಠ ಟೆಸ್ಟ್ ಸ್ಕೋರ್ ಆಗಿ ಉಳಿದಿದೆ. ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಹೋಲಿಕೆ ಮಾಡಲಾಗುತ್ತಿದೆ. ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಿರ್ಮಿಸಿದ ಹಲವು ದಾಖಲೆಗಳನ್ನು ಮಾಜಿ ನಾಯಕ ಅಳಿಸಿ ಹಾಕಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 13ನೇ ಸ್ಥಾನದಲ್ಲಿದ್ದು, ಭಾರತದ ಈ ರನ್ ಮಷಿನ್ 55.34 ಸ್ಟ್ರೈಕ್‌ರೇಟ್‌ನಲ್ಲಿ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ 8479 ರನ್ ಗಳಿಸಿದ್ದಾರೆ.
2021ರ ನಂತರ ಮತ್ತು 2022ರಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಸುದೀರ್ಘ ಕಳಪೆ ಬ್ಯಾಟಿಂಗ್ ಫಾರ್ಮ್ ಹೊಂದಿದ್ದರು. ನಂತರ ಈ ಸ್ಟಾರ್ ಬ್ಯಾಟರ್ 2022ರ ಟಿ20 ಏಷ್ಯಾ ಕಪ್‌ನಿಂದ ತನ್ನ ಹಳೆ ಫಾರ್ಮ್‌ಗೆ ಮರಳಿದರು. ಪಂದ್ಯಾವಳಿಯ ಮೊದಲು ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ಒಂದು ತಿಂಗಳಿಗಿಂತ ಅಧಿಕ ವಿಶ್ರಾಂತಿ ತೆಗೆದುಕೊಂಡಿದ್ದರು.
ಇತ್ತೀಚಿಗೆ ಲಂಡನ್‌ನ ಓವಲ್‌ನಲ್ಲಿ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಡಬ್ಲ್ಯುಟಿಸಿ) ಪಂದ್ಯದಲ್ಲಿ ತಮ್ಮ ಕಳಪೆ ಆಟಕ್ಕಾಗಿ ಟೀಕೆಗಳನ್ನು ಎದುರಿಸಿದ ಹಿರಿಯ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೊಹ್ಲಿ ಒಬ್ಬರಾದರು.
ಆ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಕೇವಲ 1 ರನ್‌ನಿಂದ ತಪ್ಪಿಸಿಕೊಂಡರು. ಪಂದ್ಯದ ಪ್ರಮುಖ ಘಟ್ಟದಲ್ಲಿ ವೈಡ್ ಆಗುತ್ತಿದ್ದ ಬಾಲ್ ಅನ್ನು ಕೆಣಕಿ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿದರು. ಈ ರೀತಿಯ ಶಾಟ್ ಆಯ್ಕೆಗೆ ಹಲವು ಮಾಜಿ ಕ್ರಿಕೆಟಿಗರಿಂದ ಟೀಕೆಗೆ ಗುರಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications