ವಿಂಡೀಸ್ ವಿರುದ್ಧ ಅರ್ಧಶತಕ ಬಾರಿಸಿ ಅಬ್ಬರಿಸಿದ ಕೊಹ್ಲಿ ಸರಣಿ ಮಧ್ಯದಲ್ಲಿಯೇ ತಂಡದಿಂದ ಔಟ್! ಕಾರಣವೇನು?

ಭಾರತ ಪ್ರವಾಸವನ್ನು ಕೈಗೊಂಡಿರುವ ಕೆರಿಬಿಯನ್ನರು ಟೀಮ್ ಇಂಡಿಯಾ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿದ್ದ ಟೀಮ್ ಇಂಡಿಯಾ ಇದೀಗ ಕೆರಿಬಿಯನ್ನರ ವಿರುದ್ಧ ಸಾಲು ಸಾಲು ಜಯವನ್ನು ಸಾಧಿಸುವುದರ ಮೂಲಕ ಪುಟಿದೆದ್ದಿದೆ.
ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳಲ್ಲಿಯೂ ಕೂಡಾ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿತ್ತು. ಹೀಗೆ ಏಕದಿನ ಸರಣಿಯನ್ನು ವಶಪಡಿಸಿಕೊಂಡ ನಂತರ ಆರಂಭವಾಗಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು, ಈ ಎರಡೂ ಪಂದ್ಯಗಳಲ್ಲಿಯೂ ಕೂಡ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಗೆದ್ದು ಬೀಗಿದೆ ಹಾಗೂ ಈ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಹಾಗೂ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಕಟ್ಟುವಲ್ಲಿ ವಿಫಲರಾದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 52 ರನ್ ಬಾರಿಸುವುದರ ಮೂಲಕ ತಂಡಕ್ಕೆ ಆಸರೆಯಾದರು. ಹೀಗೆ ಜವಾಬ್ದಾರಿಯುತ ಅರ್ಧ ಶತಕವನ್ನು ಬಾರಿಸಿದ ವಿರಾಟ್ ಕೊಹ್ಲಿ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ತಂಡದಿಂದ ಹೊರಬಿದ್ದ ವಿರಾಟ್ ಕೊಹ್ಲಿ ಮನೆಯತ್ತ
ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಭಾನುವಾರದಂದು ನಡೆಯಲಿರುವ ತೃತೀಯ ಟಿ ಟ್ವೆಂಟಿ ಪಂದ್ಯವನ್ನು ಆಡದೇ ಮನೆಯತ್ತ ಪಯಣ ಬೆಳೆಸಿದ್ದಾರೆ. ಬಯೋ ಬಬಲ್ ವ್ಯವಸ್ಥೆಯಲ್ಲಿದ್ದ ವಿರಾಟ್ ಕೊಹ್ಲಿ ಬಿಸಿಸಿಐನಿಂದ ಅನುಮತಿಯನ್ನು ಪಡೆದುಕೊಂಡಿದ್ದು ಈಗಾಗಲೇ ಸರಣಿ ಭಾರತದ ಕೈವಶವಾಗಿರುವ ಕಾರಣ ತೃತೀಯ ಪಂದ್ಯವನ್ನು ಆಡದೇ ಮನೆಗೆ ಹೊರಟಿದ್ದಾರೆ ಎನ್ನಲಾಗುತ್ತಿದೆ.

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೂ ವಿರಾಟ್ ಕೊಹ್ಲಿ ಅಲಭ್ಯ
ಸದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯುತ್ತಿದ್ದು, ಈ ಸರಣಿಯ ಅಂತಿಮ ಪಂದ್ಯ ಫೆಬ್ರವರಿ 20ರ ಭಾನುವಾರದಂದು ನಡೆಯಲಿದೆ. ಈ ಪಂದ್ಯ ಮುಗಿದ ನಂತರ ಇದೇ ತಿಂಗಳ 24, 26 ಮತ್ತು 27ರಂದು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ. ಹೌದು, ಭಾರತ ಪ್ರವಾಸವನ್ನು ಕೈಗೊಳ್ಳಲಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿಯೂ ಸಹ ವಿರಾಟ್ ಕೊಹ್ಲಿ ಭಾಗವಹಿಸುವುದಿಲ್ಲ ಎನ್ನಲಾಗುತ್ತಿದೆ.

ಕೊಹ್ಲಿ ಹೀಗೆ ದಿಢೀರನೆ ತಂಡದಿಂದ ಹೊರಗುಳಿಯಲು ಕಾರಣವೇನು?
ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ತಿಳಿಸಿರುವ ಪ್ರಕಾರ ವಿರಾಟ್ ಕೊಹ್ಲಿ ಶನಿವಾರ ಬೆಳಿಗ್ಗೆಯೇ ಬಯೋ ಬಬಲ್ ತ್ಯಜಿಸಿ ಮನೆಯತ್ತ ಪ್ರಯಾಣವನ್ನು ಕೈಗೊಂಡಿದ್ದಾರೆ. ಬಿಸಿಸಿಐನ ನಿಯಮದ ಪ್ರಕಾರ ಎಲ್ಲಾ ಮಾದರಿಯ ತಂಡಗಳಲ್ಲಿಯೂ ಸದಸ್ಯನಾಗಿರುವ ಆಟಗಾರ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಈ ರೀತಿಯ ವಿರಾಮವನ್ನು ತೆಗೆದುಕೊಳ್ಳಬಹುದಾಗಿದೆ, ಅದೇ ರೀತಿ ವಿರಾಟ್ ಕೊಹ್ಲಿ ಕೂಡ ವಿರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯ ಹಾಗೂ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗಳಿಂದ ಹೊರಗುಳಿದು ವಿಶ್ರಾಂತಿ ಪಡೆಯಲಿದ್ದು, ನಂತರದ ಸರಣಿಗಳಲ್ಲಿ ಮರಳಿ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications