ಶನಿವಾರದಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ. ಈ ಲೀಗ್‌ನ ಚಾಂಪಿಯನ್ ಪಟ್ಟದ ಮೇಲೆ 10 ತಂಡಗಳು ಕಣ್ಣು ನೆಟ್ಟಿವೆ. ಆರ್‌ಸಿಬಿ ಸಹ ಈ ಬಾರಿ ಕಪ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈದಾನದಲ್ಲಿ ಬೆವರು ಹರಿಸುತ್ತಿದೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ಗೂ ಮುನ್ನ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಈಗಾಗಲೇ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಆರ್‌ಸಿಬಿಯ ಅಭ್ಯಾಸ ಅವಧಿಗಳಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡರು. ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುವುದಲ್ಲದೆ, ಇತರ ಆಟಗಾರರಿಗೆ ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಇತ್ತೀಚೆಗೆ ನೆಟ್ ಅವಧಿಯ ಸಮಯದಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ತಂಡದ ಸಹ ಆಟಗಾರ ಫಿಲ್ ಸಾಲ್ಟ್ ಅವರಿಗೆ ತೀವ್ರವಾದ ಬ್ಯಾಟಿಂಗ್ ಅಭ್ಯಾಸ ಮಾಡಿಸಿದರು. ಈ ವೇಳೆ ವಿರಾಟ್ ಸಾಲ್ಟ್ ಅವರಿಗೆ ಸಲಹೆಗಳನ್ನು ನೀಡಿದರು. ಈ ವೇಳೆ ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಸಹ ಹಾಜರಿದ್ದರು. ಈ ವಿಡಿಯೋವನ್ನು ಆರ್‌ಸಿಬಿ ತನ್ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಅಭಿಮಾನಿಗಳನ್ನು ಸೆಳೆಯುತ್ತಿದೆ. ವಿರಾಟ್ ಅವರನ್ನು ಹೊಸ ಪಾತ್ರದಲ್ಲಿ ನೋಡಿದ ಜನ ಸಂತೋಷ ಪಟ್ಟಿದ್ದಾರೆ.
ಫಿಲ್ ಸಾಲ್ಟ್ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸುತ್ತಿದ್ದಾರೆ. ಇವರು ಇತ್ತೀಚಿಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿದ್ದರು. ಇವರು ಆಡಿದ 8 ಇನಿಂಗ್ಸ್‌ಗಳಲ್ಲಿ 230 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ. ಇವರು ಲಯಕ್ಕೆ ಮರಳುವುದು ಆರ್‌ಸಿಬಿ ತಂಡಕ್ಕೆ ಅನಿವಾರ್ಯವಾಗಿದೆ. ಸಾಲ್ಟ್ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡ ಚಾಂಪಿಯನ್ ಆಗುವಲ್ಲಿ ಶ್ರಮಿಸಿದ್ದರು. 2025ರಲ್ಲಿ ಸಾಲ್ಟ್ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 175.98 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 403 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ.
19ನೇ ಆವೃತ್ತಿಯ ಐಪಿಎಲ್ ಶನಿವಾರ (ಮಾರ್ಚ್ 28)ದಿಂದ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ.