ಆಧುನಿಕ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಹಾಗೂ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿಯ ನಿವೃತ್ತಿ ಕುರಿತು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಭಾರತದ ಸ್ಟಾರ್ ವಿರಾಟ್ ಕೊಹ್ಲಿ ಅಪ್ರತಿಮ ಕ್ರಿಕೆಟಿಗನಾಗಿದ್ದು, ಆತನಲ್ಲಿ ರನ್ ಗಳಿಸುವ ಹಸಿವು ಮತ್ತು ಉತ್ಸಾಹ ಹೆಚ್ಚಾಗಿದೆ. ಆತ ಯುವ ಆಟಗಾರರಿಗೆ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ ಎಂದು ಫಾಫ್ ಡು ಪ್ಲೆಸಿಸ್ ಶ್ಲಾಘಿಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಒಂದು ಸ್ವರೂಪದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ನಂತರ ಡಿಸೆಂಬರ್ 26ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ರೋಹಿತ್ ಶರ್ಮಾ ನಾಯಕತ್ವದಡಿ ವಿರಾಟ್ ಕೊಹ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದು, ಹರಿಣಗಳ ನಾಡಿನಲ್ಲಿ ತಂಡಕ್ಕೆ ಸರಣಿ ಗೆಲ್ಲಲು ನೆರವಾಗಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ, 2021-22ರ ಟೆಸ್ಟ್ ಸರಣಿಯಲ್ಲಿ ಹೆಚ್ಚು ರನ್ ಗಸಿದ್ದರೂ, ಶತಕ ಬಂದಿರಲಿಲ್ಲ. ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್‌ನ 30ನೇ ಶತಕ ಬಾರಿಸಲು ಎದುರು ನೋಡುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಕುರಿತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಯಾವಾಗಲೂ ಬೃಹತ್ ಸಂಖ್ಯೆಯ ಅಭಿಮಾನಿಗಳ ಎದುರೇ ಕ್ರಿಕೆಟ್ ಆಡುತ್ತಾರೆ. ಅಭಿಮಾನಿಗಳೇ ಆತನಿಗೆ ನಿಜವಾದ ಶಕ್ತಿ ಆಗಿದ್ದಾರೆ. ಆದ್ದರಿಂದಲೇ 2023ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಟಾಪ್ ರನ್ ಸ್ಕೋರರ್ ಆಗುತ್ತಾರೆ ಎಂದು ನಾನು ಹೇಳಿದ್ದೆ ಎಂದು ಫಾಫ್ ಡು ಪ್ಲೆಸಿಸ್ ಹೇಳಿದರು.

"ವಿರಾಟ್ ಕೊಹ್ಲಿಯ ರನ್ ದಾಹದ ಹಸಿವು ಯಾವ ಮಟ್ಟದಲ್ಲಿ ಇದೆ ಎಂದರೆ, ಆತನ ಬ್ಯಾಟಿಂಗ್ ಪ್ರದರ್ಶನ ನೋಡಲು ತುಂಬಾ ಮಜಾವಾಗಿರುತ್ತದೆ. ಅವರು ಏಕದಿನ ಪಂದ್ಯಗಳಲ್ಲಿ ಇನ್ನು ಎಷ್ಟು ವರ್ಷ ಆಡುತ್ತಾನೆ ಎಂಬುದನ್ನು ನೋಡಲು ಕಾತರನಾಗಿದ್ದೇನೆ. ವಿರಾಟ್ ಕೊಹ್ಲಿ ಇನ್ನೂ ಸಾಕಷ್ಟು ಸಮಯ ಕ್ರಿಕೆಟ್ ಆಡುವ ಭರವಸೆ ಇದೆ. ಅಲ್ಲದೆ ಆತನ ಬಳಿ ಇನ್ನೂ ಹೆಚ್ಚಿನ ಸಮಯವೂ ಇದೆ," ಎಂದರು.
"ಆದರೆ ಟೀಮ್ ಇಂಡಿಯಾ ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿರುವುದರಿಂದ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಒಂದು ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಬಹುದು. ಆದರೆ ಆತ 3 ಸ್ವರೂಪದ ಕ್ರಿಕೆಟ್‌ನಲ್ಲೂ ಮುಂದುವರಿಯುವ ಭರವಸೆ ನನಗಿದೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಅಭಿಪ್ರಾಯಪಟ್ಟರು.
2023ರ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 545 ರನ್ ಗಳಿಸಿದ್ದಾರೆ.
ಇನ್ನು ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆ ಹಿಂದಿಕ್ಕಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ತಮ್ಮ 50ನೇ ಏಕದಿನ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.
2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ 3 ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಈ ವರ್ಷ ಒಟ್ಟಾರೆ 6 ಶತಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಶತಕ ಬಾರಿಸಲು ಎದುರು ನೋಡುತ್ತಿದ್ದಾರೆ.