ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗಿರಲು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರು. ಇದರ ಫಲವಾಗಿ ಸ್ಟಾರ್ ಸೆಲೆಬ್ರಿಟಿ ದಂಪತಿ ತಮ್ಮ ಎರಡನೇ ಮಗು "ಅಕಾಯ್'ನನ್ನು ಸ್ವಾಗತಿಸಿದರು.
ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ, ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ನಂತರ ಭಾರತ ತಂಡ 4-1 ಅಂತರದಿಂದ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡದ ಪರವಾಗಿ ಆಡಿದರು. ಆ ವೇಳೆ ಅವರು ಆಡಿದ ಎರಡು ಇನ್ನಿಂಗ್ಸ್‌ಗಳಲ್ಲಿ 29 ಮತ್ತು 0 ಸ್ಕೋರ್‌ಗಳನ್ನು ಗಳಿಸಿದರು.

ಇದೀಗ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ವಿರಾಟ್ ಕೊಹ್ಲಿಯ ವಿಶ್ರಾಂತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಸ್ಟಾರ್ ಕ್ರಿಕೆಟಿಗನಿಗೆ ಅರ್ಹವಾದ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ, ಅವರಿಗೆ ಉತ್ತಮ ವಿಶ್ರಾಂತಿಯ ಅಗತ್ಯವಿತ್ತು ಮತ್ತು ಅವರು ಅದನ್ನು ಪಡೆದರು," ಎಂದು ಹರ್ಭಜನ್ ಸಿಂಗ್ ತಿಳಿಸಿದರು.
"2011ರಲ್ಲಿ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅವರು ತಂಡಕ್ಕೆ ಬಂದರು ಮತ್ತು ಅವರು ತಮ್ಮ ಮೊದಲ ವಿಶ್ವಕಪ್ ಗೆದ್ದರು. ನಾವು ಅದಾಗಲೇ ಮೂರು ಅಥವಾ ನಾಲ್ಕು ವಿಶ್ವಕಪ್‌ಗಳನ್ನು ಆಡಿದ್ದೆವು ಮತ್ತು ಅವರು ಅದನ್ನು ಮೊದಲ ಬಾರಿಗೆ ಗೆದ್ದರು," ಎಂದರು.
"ಇದು ಅವರ ಅದೃಷ್ಟವಾಗಿತ್ತು ಮತ್ತು ಅದರ ನಂತರ ವಿರಾಟ್ ಕೊಹ್ಲಿ 2015, 2019, ಮತ್ತು 2023ರ ವಿಶ್ವಕಪ್‌ನಲ್ಲಿ ದೊಡ್ಡ ಆಟಗಾರನಾಗಿ ಮಾರ್ಪಟ್ಟರು. ಈ ವೇಳೆ ಟಿ20 ಸೇರಿದಂತೆ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಗಮನಾರ್ಹವಾಗಿ, ವಿರಾಟ್ ಕೊಹ್ಲಿ 2011ರ ವಿಶ್ವಕಪ್ ವಿಜೇತ ಭಾರತದ ತಂಡದ ಭಾಗವಾಗಿದ್ದರು. ಅಲ್ಲಿ ಅವರು ಬಾಂಗ್ಲಾದೇಶ ವಿರುದ್ಧದ ತಮ್ಮ ಮೊದಲ ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಶತಕವನ್ನು ಗಳಿಸಿದರು.
ಅಂದಿನಿಂದ, ಟಿ20 ವಿಶ್ವಕಪ್‌ನ ಐದು ಆವೃತ್ತಿಗಳು ಮತ್ತು ಏಕದಿನ ವಿಶ್ವಕಪ್‌ನ ಮೂರು ಆವೃತ್ತಿಗಳನ್ನು ಆಡಿದ್ದರೂ, ವಿಶ್ವಕಪ್ ಟ್ರೋಫಿಯ ಮೇಲೆ ಕೈ ಹಾಕಲು ವಿರಾಟ್ ಕೊಹ್ಲಿಗೆ ಸಾಧ್ಯವಾಗಲಿಲ್ಲ.
ವಿರಾಟ್ ಕೊಹ್ಲಿಯ ಕ್ರಿಕೆಟ್ ಹಸಿವಿನ ಬಗ್ಗೆ ಮತ್ತಷ್ಟು ಮಾತನಾಡಿದ ಹರ್ಭಜನ್ ಸಿಂಗ್, ಐಸಿಸಿ ಪ್ರಶಸ್ತಿಯನ್ನು ಗೆಲ್ಲುವುದು ಸ್ಟಾರ್ ಕ್ರಿಕೆಟಿಗನ ಅಂತಿಮ ಗುರಿಯಾಗಿದೆ ಮತ್ತು ಅವರು ಮತ್ತೊಂದು ವಿಶ್ವಕಪ್ ಗೆಲ್ಲುವವರೆಗೂ ಅವರು ತೃಪ್ತರಾಗುವುದಿಲ್ಲ ಎಂದು ಹೇಳಿದರು.
"ಹೀಗಾಗಿ ಆ ಭಾವನೆ ಸ್ಟಾರ್ ಕ್ರಿಕೆಟಿಗನ ಮನಸ್ಸಿನಲ್ಲಿ ಹಾಗೆ ಉಳಿದಿದೆ. ಅವನು ವಿಶ್ವಕಪ್ ಟ್ರೋಫಿಗೆ ಕೈ ಹಾಕುವವರೆಗೂ ಅವನು ತೃಪ್ತನಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಈಗಾಗಲೇ ಸಾಕಷ್ಟು ದಾಖಲೆಗಳನ್ನು ಮುರಿದಿದ್ದಾರೆ ಮತ್ತು ಹೆಚ್ಚಿನ ರನ್ ಗಳಿಸಿದ್ದಾರೆ. ವಿಶ್ವಕಪ್ ಟ್ರೋಫಿ ಕೈಗೆ ಸಿಕ್ಕರೆ ಅವರ ಹಸಿವು ನೀಗುತ್ತದೆ," ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದರು.

ಇದೇ ವೇಳೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಜೂನ್ 1ರಿಂದ ಆರಂಭವಾಗಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದಿಂದ ವಿರಾಟ್ ಕೊಹ್ಲಿಯನ್ನು ಕೈಬಿಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂಬ ವ್ಯಾಪಕ ವರದಿಗಳು ಹಬ್ಬಿವೆ.
ಗಮನಾರ್ಹವಾಗಿ, ಸ್ಟಾರ್ ಬ್ಯಾಟರ್ ಟಿ20 ವಿಶ್ವಕಪ್‌ನ 25 ಇನ್ನಿಂಗ್ಸ್‌ಗಳಿಂದ 81.5ರ ಸರಾಸರಿಯಲ್ಲಿ 1141 ರನ್‌ಗಳೊಂದಿಗೆ ಅಸಾಧಾರಣ ಸಂಖ್ಯೆಯನ್ನು ಹೊಂದಿದ್ದಾರೆ. ಅವರ ಹೆಸರಿಗೆ 14 ಅರ್ಧ ಶತಕಗಳೊಂದಿಗೆ 131.3ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ವಿರಾಟ್ ಕೊಹ್ಲಿ 2014 (319 ರನ್) ಮತ್ತು 2022 (296 ರನ್) ರಲ್ಲಿ ಕ್ರಮವಾಗಿ ಎರಡು ಬಾರಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮುಗಿಸಿದರು. ಅವರು 2014 ಮತ್ತು 2016ರ ಸತತ ಆವೃತ್ತಿಗಳಲ್ಲಿ (273 ರನ್) ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದರು.
ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ವಿರಾಟ್ ಕೊಹ್ಲಿಯನ್ನು ಕೈಬಿಡಲು ಭಾರತ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ, ಭಾರತೀಯ ಮತ್ತು ಅವರ ಅಭಿಮಾನಿಳಿಗೆ ತೀವ್ರ ನಿರಾಸೆಯಾಗಲಿದೆ.
ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಬಿಸಿಸಿಐ ಏಪ್ರಿಲ್ ಮಧ್ಯದಲ್ಲಿ ಭಾರತ ತಂಡವನ್ನು ಪ್ರಕಟಿಸಲಿದೆ ಮತ್ತು ಅದರಲ್ಲಿ ವಿರಾಟ್ ಕೊಹ್ಲಿಯ ಹೆಸರನ್ನು ಕಾಣಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹೀಗಾಗಿ 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.