ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 5ರಂದು ಅಧಿಕೃತವಾಗಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಸದ್ಯ ಎಲ್ಲಾ ಹತ್ತು ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ನಿರತರಾಗಿದ್ದು, ಅನಿರೀಕ್ಷಿತ ಮಳೆಯ ನಡುವೆ ಪಂದ್ಯಗಳು ನಡೆಯುತ್ತಿವೆ. ಆದರೂ, ಮುಖ್ಯ ಪಂದ್ಯಾವಳಿ ವೇಳೆಗೆ ಮಳೆ ವಿರಾಮ ಪಡೆಯುವ ಸಾಧ್ಯತೆ ಇದೆ.

ಇನ್ನು ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭರ್ಜರಿ ತಯಾರಿ ನಡೆಸಿದೆ. ಇದೇ ವೇಳೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಮೊದಲ ಆಯ್ಕೆಯ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಏಕದಿನ ವಿಶ್ವಕಪ್‌ಗಾಗಿ ಭಾರತ ತನ್ನ ಅಂತಿಮ 15 ಸದಸ್ಯರ ತಂಡವನ್ನು ಪ್ರಕಟಿಸಿದೆ ಮತ್ತು ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಅನ್ನು ಆಯ್ಕೆ ಮಾಡಿದೆ. ಭಾರತದ ಅಗ್ರ ಕ್ರಮಾಂಕದಲ್ಲಿ ಶುಭ್ಮನ್ ಗಿಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಥಿರ ಆಟಗಾರರನ್ನು ಹೊಂದಿದೆ.

ಅಗ್ರ ಮೂರರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡ ಬಹು ಆಯ್ಕೆಗಳನ್ನು ಹೊಂದಿದೆ. ಅಲ್ಲಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದೆ. ಎಲ್ಲರೂ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಯಾರನ್ನು ಮೊದಲ ಆಯ್ಕೆಯಲ್ಲಿ ಆಡಿಸಬೇಕು ಎಂಬ ಗೊಂದಲವೂ ಇದೆ.
ಏಕದಿನ ವಿಶ್ವಕಪ್‌ಗೆ ಮುನ್ನ ಕ್ರಿಕ್‌ಬಝ್‌ನೊಂದಿಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್ ಅವರ ಅತ್ಯುತ್ತಮ ಫಾರ್ಮ್‌ನ ಹೊರತಾಗಿಯೂ ಅವರನ್ನು ಮೊದಲ ಆಯ್ಕೆಯ ಆಡುವ 11ರ ಬಳಗದಲ್ಲಿ ಹೆಸರಿಸಲಾಗುವುದಿಲ್ಲ ಮತ್ತು ಕೆಎಲ್ ರಾಹುಲ್ ಅವರು ತಂಡದ ಆದ್ಯತೆಯ ಸದಸ್ಯರಾಗಿದ್ದಾರೆ ಎಂದಿದ್ದಾರೆ.
"6 ಮತ್ತು 7ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಇರುತ್ತಾರೆ. ಹಾಗಾಗಿ ಆ ಎರಡೂ ಸ್ಥಾನಗಳಲ್ಲಿ ಸೂರ್ಯಕುಮಾರ್ ಇರುವುದಿಲ್ಲ. ಆದರೂ ನಂ.5 ಖಾಲಿ ಇದೆ".

"ಆದರೆ ಹಾರ್ದಿಕ್ ಪಾಂಡ್ಯ ನಿಮ್ಮ ಆರನೇ ಬೌಲರ್ ಆಗಿದ್ದರೆ, ಕೆಎಲ್ ರಾಹುಲ್ 5ನೇ ಮತ್ತು ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ, ನಂತರ ಬೌಲರ್‌ಗಳು ಬರುತ್ತಾರೆ. ಇಶಾನ್ ಕಿಶನ್ ಎಲ್ಲೋ ಒಂದು ಸ್ಥಾನದಲ್ಲಿ ಹೊಂದಿಕೊಳ್ಳಬಹುದು ಎಂದು ನಾನು ಭಾವಿಸಿದ್ದೇನೆ".
"ಆದರೆ, ಆಸ್ಟ್ರೇಲಿಯಾ ವಿರುದ್ಧ ಶ್ರೇಯಸ್ ಅಯ್ಯರ್ ಗಳಿಸಿದ ಶತಕ, ಅವರು ನಂ.4ರಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅದು ಕ್ರಮವಾಗಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಕ್ರಮವಾಗಿ 4, 5 ಮತ್ತು 6ನೇ ಕ್ರಮಾಂಕದಲ್ಲಿ ಬರುತ್ತಾರೆ," ಎಂದು ವೀರೇಂದ್ರ ಸೆಹ್ವಾಗ್ ಕ್ರಿಕ್‌ಬಝ್‌ನಲ್ಲಿ ತಿಳಿಸಿದರು.
ಕೆಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಭಾರತದ ದ್ವಿಪಕ್ಷೀಯ ಸರಣಿಯ 2 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರು ಮತ್ತು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೆಎಲ್ ರಾಹುಲ್ ದೀರ್ಘಕಾಲದ ಗಾಯದಿಂದ ಹೊರಗುಳಿದಿದ್ದರು. ಆದರೆ, ಏಷ್ಯಾ ಕಪ್‌ನಲ್ಲಿ ಭಾರತ ತಂಡಕ್ಕೆ ಅದ್ಭುತ ಪುನರಾಗಮನ ಮಾಡಿದರು.
ಬೆಂಚ್ ಆಟಗಾರರ ಆಯ್ಕೆ ಕುರಿತು ಮಾತನಾಡಿದ ವೀರೇಂದ್ರ ಸೆಹ್ವಾಗ್ ಅವರು ಸೂರ್ಯಕುಮಾರ್ ಯಾದವ್‌ಗಿಂತ ಮೊದಲು ಇಶಾನ್ ಕಿಶನ್‌ಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
"ಸದ್ಯ ಭಾರತವು ಈ ಸಂಯೋಜನೆಯನ್ನು ಹೇಗೆ ನೋಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ 10 ಓವರ್‌ಗಳನ್ನು ಬೌಲ್ ಮಾಡುತ್ತಾರೆ ಎಂದು ಅವರು ಭಾವಿಸುತ್ತಾರೆಯೇ? ಏಕೆಂದರೆ ಅದು ಭಾರತಕ್ಕೆ ಹೆಚ್ಚುವರಿ ಬೌಲರ್ ಆಯ್ಕೆ ನೀಡುತ್ತದೆ".
"ಹಾಗಾಗಿ ಸೂರ್ಯಕುಮಾರ್ ಯಾದವ್ ಈ ಸಂಯೋಜನೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಮತ್ತು ಸ್ಲಾಟ್ ಇದ್ದರೂ ಇಶಾನ್ ಕಿಶನ್ ಎಡಗೈ ಆಟಗಾರನಾಗಿರುವುದರಿಂದ ಅವರನ್ನು ಮೊದಲು ಆಯ್ಕೆ ಮಾಡಬೇಕು," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.