
ದುಬೈ: ದುಬೈನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್‌ನ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದಿದ್ದರು. ಅದೂ ನಾಯಕ ವಿರಾಟ್ ಕೊಹ್ಲಿಯನ್ನು ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್‌ಗೆ ಕಳುಹಿಸಿದ್ದರು.
ತೆವಾಟಿಯಾ ಅವರ ಈ ಕ್ಯಾಚ್‌ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ತೆವಾಟಿಯಾಗೆ ಅವಕಾಶ ನೀಡಿದರೆ ಅವರು ಏನು ಬೇಕಾದರೂ ಮಾಡಬಲ್ಲರು ಎಂದು ಸೆಹ್ವಾಗ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
13.1ನೇ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿ ಎಸೆತಕ್ಕೆ ಕೊಹ್ಲಿ ಚೆಂಡನ್ನು ಸಿಕ್ಸ್ ಲೈನ್‌ಗೆ ಅಟ್ಟಿದ್ದರು. ಬೌಂಡರಿ ಲೈನ್ ಬಳಿಯಿದ್ದ ರಾಹುಲ್ ತೆವಾಟಿಯಾ ಚೆಂಡು ಹಿಡಿದು ಬ್ಯಾಲನ್ಸ್ ಸಿಗದಾಗ ಚೆಂಡನ್ನು ಟಾಸ್ ಮಾಡಿ ಮತ್ತೆ ಮೈದಾನದೊಳಕ್ಕೆ ಬಂದು ಕ್ಯಾಚ್ ಪೂರ್ತಿಗೊಳಿಸಿದ್ದರು.
ತೆವಾಟಿಯಾ ಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಸೆಹ್ವಾಗ್, 'ತಾಹುಲ್ ತೆವಾಟಿಯಾ ಏನು ಬೇಕಾದರೂ ಮಾಡುತ್ತಾರೆ. ಅವರು ಆಟ ಎಂಜಾಯ್ ಮಾಡುತ್ತಿರುವುದನ್ನು ನೋಡಿದರೆ ಈ ಸಮಯದಲ್ಲಿ ಕೋವಿಡ್-19 ಲಸಿಕೆಯೂ ಕಂಡು ಹಿಡಿಯಬಲ್ಲರು,' ಎಂದು ಬರೆದುಕೊಂಡಿದ್ದಾರೆ.