ಭಾರತದ ಸ್ಟಾರ್ ಸ್ಫೋಟಕ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದರೆ ಆ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವ ಆಟಗಾರ ವೀರೇಂದ್ರ ಸೆಹ್ವಾಗ್. ಇವರು ಕ್ರಿಕೆಟ್‌ನ ಯಾವುದೇ ಫಾರ್ಮೆಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ರೀತಿ ಬ್ಯಾಟ್ ಮಾಡಿದ ಪ್ಲೇಯರ್ ವೀರು. ಇವರು ಭಾರತದ ಪರ ತ್ರಿಪಲ್ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಮೂರನೂರಕ್ಕೂ ಹೆಚ್ಚು ರನ್‌ಗಳನ್ನು ಎರಡು ಬಾರಿ ಬಾರಿಸಿದ ವಿಶ್ವದ ಕೆಲವೇ ಕೆಲವು ಆಟಗಾರರಲ್ಲಿ ವೀರೂಗೆ ಸ್ಥಾನವಿದೆ.
ವೀರೇಂದ್ರ ಸೆಹ್ವಾಗ್ ಅವರು ಆಡುವ ಧಾಟಿ ಇನ್ನು ಅವರ ಅಭಿಮಾನಿಗಳಲ್ಲಿ ಹಾಗೆ ಇದೆ. ಸೆಹ್ವಾಗ್ ತಮ್ಮ ವೃತ್ತಿ ಜೀವನದಲ್ಲಿ ಹಲವು ದೊಡ್ಡ ಇನ್ನಿಂಗ್ಸ್ ಕಟ್ಟಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಹಾದಿಯನ್ನೇ ಅವರ ಮಗ ಕೂಡ ಅನುಸರಿಸುತ್ತಿದ್ದಾರೆ. ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಸ್ಫೋಟಕ ದ್ವಿಶತಕ ಸಿಡಿಸಿದ್ದಾರೆ. ಆದರೆ, ತ್ರಿಶತಕದಿಂದ ವಂಚಿತರಾದರು.

ಕೂಚ್ ಬೆಹಾರ್ ಟ್ರೋಫಿ ಪಂದ್ಯದ ಎರಡನೇ ದಿನ ದೆಹಲಿ ಪರ ಆರ್ಯವೀರ್ ಅವರು ಸ್ಥಿರ ಪ್ರದರ್ಶನ ನೀಡಿದರು. ಶಿಲ್ಲಾಂಗ್‌ನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಆರ್ಯವೀರ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು ಜಸ್ಟ್ 3 ರನ್‌ಗಳಿಂದ ತ್ರಿಶತಕ ತಪ್ಪಿಸಿಕೊಂಡರು. ಆರ್ಯವೀರ್ 297 ರನ್ ಗಳಿಸಿ ಔಟಾದರು. ಅವರು ತಮ್ಮ ತಂದೆಯಂತೆ ಟ್ರಿಪಲ್ ಸೆಂಚುರಿ ಗಳಿಸಲು ಸಾಧ್ಯವಾಗಲಿಲ್ಲ. ಕೂಚ್ ಬೆಹರ್ ಟ್ರೋಫಿಯು ಅಂಡರ್-19 ವಯೋಮಿತಿಯ ಪ್ಲೇಯರ್‌ಗಳಿಗೆ ಬಿಸಿಸಿಐ ಆಯೋಜಿಸಿರುವ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿಯಾಗಿದೆ.
ಇದೇ ನವೆಂಬರ್ 20ರಿಂದ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೇಘಾಲಯ ಮೊದಲ ಇನಿಂಗ್ಸ್‌ನಲ್ಲಿ 260 ರನ್ ಗಳಿಸಿತ್ತು. ಡೆಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 208 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಆರ್ಯವೀರ್ ಮತ್ತು ಅರ್ನವ್ ಎಸ್ ಬುಗ್ಗಾ ಮೊದಲ ವಿಕೆಟ್‌ಗೆ 180 ರನ್ ಜೊತೆಯಾಟ ನೀಡಿದರು. ಆರ್ಯವೀರ್ ದ್ವಿಶತಕ ಪೂರೈಸಿದರು. ಅರ್ನವ್ 114 ರನ್ ಗಳಿಸಿದರು. 17ರ ಹರೆಯದ ಆರ್ಯವೀರ್ 229 ಎಸೆತಗಳಲ್ಲಿ 200 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಮೂರನೇ ದಿನದಾಟದಲ್ಲಿ ಆರ್ಯ 97 ರನ್ ಸಿಡಿಸಿ ಔಟ್ ಆದರು. ಆರ್ಯ ವೀರ್ 309 ಎಸೆತಗಳನ್ನು ಎದುರಿಸಿ 297 ರನ್ ಸಿಡಿಸಿದರು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 51 ಬೌಂಡರಿ, 3 ಸಿಕ್ಸರ್ ಸೇರಿವೆ. ಡೆಲ್ಲಿ 5 ವಿಕೆಟ್‌ಗೆ 623 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ತಮ್ಮ ಮಗನ ಆಟವನ್ನು ಕಂಡು ವೀರೇಂದ್ರ ಸೆಹ್ವಾಗ್ ಪೋಸ್ಟ್ ಮಾಡಿದ್ದಾರೆ. ಆರ್ಯವೀರ್ ಸೆಹ್ವಾಗ್ ತುಂಬಾ ಚೆನ್ನಾಗಿ ಆಡಿದ್ದಾರೆ ಎಂದು ಸೆಹ್ವಾಗ್ ಬರೆದಿದ್ದಾರೆ. ಫೆರಾರಿಯನ್ನು 23 ರನ್‌ಗಳಿಂದ ತಪ್ಪಿಸಿಕೊಂಡಿದ್ದೀರಿ. ಚೆನ್ನಾಗಿ ಆಡಿದ್ದೀರಿ, ಉತ್ಸಾಹವನ್ನು ಇಟ್ಟುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಬಾರಿ ತ್ರಿಶತಕ ಬಾರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಮುಲ್ತಾನ್‌ನಲ್ಲಿ ಸೆಹ್ವಾಗ್ 309, ದಕ್ಷಿಣ ಆಫ್ರಿಕಾ ವಿರುದ್ಧ 2008ರಲ್ಲಿ 319 ರನ್ ಗಳಿಸಿದ್ದರು. ವೀರೇಂದ್ರ ಸೆಹ್ವಾಗ್ ಅವರು ತಮ್ಮ ಮಗನಿಗೆ ಫೆರಾರಿಯನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು.