ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಎಲ್ಲಾ ಹತ್ತು ತಂಡಗಳೂ ಸಜ್ಜಾಗುತ್ತಿದ್ದು, ಬಲಿಷ್ಠ ತಂಡದ ಆಯ್ಕೆಯಲ್ಲಿ ತೊಡಗಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಂಗಳವಾರ, ಸೆಪ್ಟೆಂಬರ್ 5ರಂದು ಬಹು ನಿರೀಕ್ಷಿತ 2023ರ ಏಕದಿನ ವಿಶ್ವಕಪ್‌ಗಾಗಿ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿತು.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು 2023ರ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡದ ಜರ್ಸಿಯಲ್ಲಿ ಬದಲಾವಣೆ ಮಾಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪ್ರಧಾನ ಕಾರ್ಯದರ್ಶಿ ಜಯ್ ಶಾ ಅವರಿಗೆ ಒತ್ತಾಯಿಸಿದ್ದಾರೆ.

2011ರ ಏಕದಿನ ವಿಶ್ವಕಪ್ ವಿಜೇತ ಆಟಗಾರನಾಗಿರುವ ವೀರೇಂದ್ರ ಸೆಹ್ವಾಗ್ ಅವರು ಐಸಿಸಿ ಪಂದ್ಯಾವಳಿಗಾಗಿ ಭಾರತ ತಂಡದ ಆಟಗಾರರ ಜರ್ಸಿಯಲ್ಲಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸಬೇಕು ಎಂದು ಆಗ್ರಹಿಸಿದರು.
2023ರ ಏಕದಿನ ವಿಶ್ವಕಪ್‌ಗಾಗಿ ಆಯ್ಕೆಯಾದ ಭಾರತ ತಂಡವನ್ನು ಎಕ್ಸ್ (ಟ್ವಿಟ್ಟರ್)ನಲ್ಲಿ ಮರು ಪೋಸ್ಟ್ ಮಾಡಿರುವ ವೀರೇಂದ್ರ ಸೆಹ್ವಾಗ್ ತಮ್ಮ ವಿನಂತಿಯನ್ನು ಮಾಡಿದ್ದು, ಆಟಗಾರರ ಜೆರ್ಸಿಯ ಎದೆಯ ಮೇಲೆ 'ಭಾರತ್' ಇರಬೇಕು ಎಂದರು.
"ಟೀಮ್ ಇಂಡಿಯಾ ಅಲ್ಲ, ಟೀಮ್ ಭಾರತ್. ಈ ಬಾರಿಯ ವಿಶ್ವಕಪ್‌ನಲ್ಲಿ ನಾವು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಅವರನ್ನು ಹುರಿದುಂಬಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತ್ ಇರಲಿ ಮತ್ತು ಆಟಗಾರರು "ಭಾರತ್' ಇರುವ ಜೆರ್ಸಿಯನ್ನು ಧರಿಸಲಿ," ಎಂದು ಜಯ್ ಶಾ ಅವರನ್ನು ಟ್ಯಾಗ್ ಮಾಡಿ ವೀರೇಂದ್ರ ಸೆಹ್ವಾಗ್ ರಿಟ್ವೀಟ್ ಮಾಡಿದ್ದಾರೆ.

ಬಳಿಕ, ಇಂಡಿಯಾ ಹೆಸರನ್ನು ಬ್ರಿಟಿಷರು ಇಟ್ಟಿದ್ದಾರೆ ಮತ್ತು ಅದನ್ನು ಮೂಲ ಹೆಸರಿಗೆ ಬದಲಾಯಿಸಬೇಕು ಎಂದು ಮಾಜಿ ಕ್ರಿಕೆಟಿಗ ಸೆಹ್ವಾಗ್ ಹೇಳಿದ್ದು, "ಹೆಸರು ನಮ್ಮಲ್ಲಿ ಹೆಮ್ಮೆಯನ್ನು ಹುಟ್ಟಿಸುವಂತಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ" ಎಂದರು.
"ನಾವು ಭಾರತೀಯರು, ಇಂಡಿಯಾ ಬ್ರಿಟಿಷರು ನೀಡಿದ ಹೆಸರು ಮತ್ತು ನಮ್ಮ ಮೂಲ ಹೆಸರನ್ನು 'ಭಾರತ್' ಅನ್ನು ಅಧಿಕೃತವಾಗಿ ಮರಳಿ ಪಡೆಯುತ್ತಿರುವು ಬಹಳ ತಡವಾಗಿದೆ. ಈ ವಿಶ್ವಕಪ್‌ನಲ್ಲಿ ನಮ್ಮ ಆಟಗಾರರು ಜೆರ್ಸಿ ಮೇಲೆ ಭಾರತವನ್ನು ಹೊಂದಬೇಕೆಂದು ನಾನು ಬಿಸಿಸಿಐ ಮತ್ತು ಜಯ್ ಶಾ ಅವರನ್ನು ಒತ್ತಾಯಿಸುತ್ತೇನೆ," ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ತಿಳಿಸಿದರು.
"1996ರ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವು ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಹಾಲೆಂಡ್ ಹೆಸರಿನಲ್ಲಿ ಆಡಲು ಬಂದಿತ್ತು. 2003ರಲ್ಲಿ ನಾವು ಅವರನ್ನು ಮುಖಾಮುಖಿಯಾದಾಗ ಅವರು ನೆದರ್ಲ್ಯಾಂಡ್ಸ್ ಆಗಿ ಬದಲಾಯಿಸಿಕೊಂಡಿದ್ದರು ಮತ್ತು ಅದನ್ನೇ ಮುಂದುವರಿಸಿದ್ದಾರೆ," ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು.
"ಇನ್ನು ಬ್ರಿಟಿಷರು ಇಟ್ಟಿದ್ದ ಬರ್ಮಾ ಹೆಸರನ್ನು ಇದೀಗ ಮ್ಯಾನ್ಮಾರ್ ಎಂದು ಬದಲಾಯಿಸಲಾಗಿದೆ ಮತ್ತು ಇನ್ನೂ ಹಲವು ದೇಶಗಳು ತಮ್ಮ ಮೂಲ ಹೆಸರಿಗೆ ಮರಳಿದ್ದಾರೆ," ಎಂದು ವೀರೇಂದ್ರ ಸೆಹ್ವಾಗ್ ಉದಾಹರಣೆ ಸಮೇತ ವಿವರಿಸಿದರು.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಶ್ರೀಲಂಕಾದ ಕ್ಯಾಂಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದರು.
ಭಾರತದ 17 ಸದಸ್ಯರ ಏಷ್ಯಾಕಪ್ ತಂಡದ ಇಬ್ಬರು ಸದಸ್ಯರಾದ ಪ್ರಸಿದ್ಧ್ ಕೃಷ್ಣ ಮತ್ತು ತಿಲಕ್ ವರ್ಮಾ ಹಾಗೂ ಮೀಸಲು ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಭಾರತದ ಏಕದಿನ ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ.