ಜುಲೈ 21 ಭಾನುವಾರ, ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿದ ನಂತರ ಭಾರತ ತಂಡಕ್ಕೆ ಇತ್ತೀಚೆಗೆ ಹೊಸ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಯಾರೆಂಬ ಪ್ರಶ್ನೆಗೂ ಉತ್ತರ ಸಿಗಲಿದೆ.
ಗಂಭೀರ್ ಭಾರತ ತಂಡದ ಕೋಚ್ ಆದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತನ್ನ ಹೊಸ ಮಾರ್ಗದರ್ಶಕನನ್ನು ಹುಡುಕುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇನ್ನೂ ಹಲವು ತಂಡಗಳು ತಮ್ಮ ಕೋಚ್ ಬದಲಾವಣೆಗೆ ಸಿದ್ಧತೆ ನಡೆಸಿವೆ.

ಲಕ್ನೋ ಫ್ರಾಂಚೈಸಿ ಮಾಜಿ ಟೀಮ್ ಇಂಡಿಯಾದ ಆಟಗಾರ ಮತ್ತು ಎನ್‌ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರನ್ನು ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ಸೇರಿಸಿಕೊಳ್ಳಲು ಬಯಸಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ವರದಿಯ ಪ್ರಕಾರ, ಲಕ್ನೋ ಫ್ರಾಂಚೈಸ್ ಲಕ್ಷ್ಮಣ್ ಅವರೊಂದಿಗೆ ಇದಕ್ಕಾಗಿ ಮಾತುಕತೆ ನಡೆಸಿದೆ. ಆದರೇ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ಲಕ್ನೋ ನೀಡಿಲ್ಲ.
ಲಕ್ಷ್ಮಣ್ ಪ್ರಸ್ತುತ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅಧಿಕಾರಾವಧಿಯು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಲಕ್ಷ್ಮಣ್ ಅವರು ಬಿಸಿಸಿಐನಿಂದ ಎನ್‌ಸಿಎ ವಿಸ್ತರಣೆಗೆ ಬೇಡಿಕೆ ಇಡುವುದಿಲ್ಲ ಎಂಬ ವರದಿಗಳೂ ಇವೆ.
ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಬದಲಿಸಲು ವಿವಿಎಸ್ ಲಕ್ಷ್ಮಣ್ ಬಿಸಿಸಿಐನ ಮೊದಲ ಆಯ್ಕೆಯಾಗಿದ್ದರು. ಆದರೆ ಲಕ್ಷ್ಮಣ್ ಅವರು ತಂಡದೊಂದಿಗೆ ಹೆಚ್ಚು ಪ್ರಯಾಣಿಸಲು ಇಷ್ಟವಿಲ್ಲದ ಕಾರಣದಿಂದ ಹೆಡ್ ಕೋಚ್ ಸ್ಥಾನವನ್ನು ನಿರಾಕರಿಸಿದರು.
ಮೂಲಗಳ ಪ್ರಕಾರ, ಲಕ್ಷ್ಮಣ್ ಅವರು ಎನ್‌ಸಿಎ ನಿರ್ದೇಶಕರಾಗಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ. ಅವರು ತಮ್ಮ ಸ್ಥಳವನ್ನು ಹೈದರಾಬಾದ್‌ನಿಂದ ಬದಲಾಯಿಸಿದ್ದಾರೆ.