IPL 2023 RCB vs DC: ಮೊದಲ ಪಂದ್ಯದಲ್ಲೇ ಮಿಂಚಿದ ಕನ್ನಡಿಗ ವೈಶಾಕ್ ವಿಜಯ್‌ಕುಮಾರ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್‌ಸಿಬಿ ಪರವಾಗಿ ಮೊದಲನೇ ಪಂದ್ಯವನ್ನಾಡಿದ ಕರ್ನಾಟಕ ತಂಡದ ಬೌಲರ್ ವೈಶಾಕ್ ವಿಜಯ್‌ಕುಮಾರ್ ಮಿಂಚು ಹರಿಸಿದರು. ಪ್ರಮುಖ ಮೂರು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣವಾದರು.
ಕಳೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಬೌಲಿಂಗ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಪವರ್ ಪ್ಲೇನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದ ಅವರು ಹೆಚ್ಚಿನ ರನ್ ಬಿಟ್ಟುಕೊಡುತ್ತಿದ್ದರು. ಸತತವಾಗಿ ತಪ್ಪುಗಳನ್ನು ಮಾಡಿದ ನಂತರ ಇಂದು ಯುವ ವೇಗಿ ಸ್ಥಳೀಯ ಪ್ರತಿಭೆ ವೈಶಾಕ್ ವಿಜಯ್ ಕುಮಾರ್ ಅವರಿಗೆ ಅವಕಾಶ ನೀಡಿತು. ತಮ್ಮ ಮೊದಲನೇ ಪಂದ್ಯದಲ್ಲೇ ಅವರು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು.

ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು. ಕುಲದೀಪ್ ಯಾದವ್ ಮತ್ತು ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಪ್ರಮುಖ ಮೂರು ವಿಕೆಟ್ ಪಡೆದ ವೈಶಾಕ್
ಸವಾಲಿನ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಪೃಥ್ವಿ ಶಾ ಅವರನ್ನು ಅದ್ಭುತವಾಗಿ ರನೌಟ್ ಮಾಡುವ ಮೂಲಕ ಅನುಜ್ ರಾವತ್ ಮೊದಲ ಆಘಾತ ನೀಡಿದರು. ವೇಯ್ನ್ ಪಾರ್ನೆಲ್ ತಮ್ಮ ಮೊದಲನೇ ಓವರ್ ನಲ್ಲೇ ಮಿಚೆಲ್ ಮಾರ್ಷ್ ಅವರ ವಿಕೆಟ್ ಪಡೆದುಕೊಂಡರು. ಯಶ್ ಧುಲ್ ಕೂಡ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.
ಮೂರು ವಿಕೆಟ್ ಬಿದ್ದರೂ ಉತ್ತಮ ಫಾರ್ಮ್‌ನಲ್ಲಿದ್ದ ಡೇವಿಡ್ ವಾರ್ನರ್ ತಮ್ಮ ಉತ್ತಮ ಬ್ಯಾಟಿಂಗ್ ಮುಂದುವರೆಸಿದರು, ಬೌಂಡರಿಗಳನ್ನು ಗಳಿಸುವ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು, 6ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ವೈಶಾಖ್ ವಿಜಯ್‌ಕುಮಾರ್ ತಮ್ಮ ಓವರ್ ನ 4ನೇ ಎಸೆತದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಪಡೆದು ಪಂದ್ಯವನ್ನು ಆರ್ ಸಿಬಿ ಕಡೆ ತಿರುಗಿಸಿದರು.
ನಂತರ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 21 ರನ್ ಗಳಿಸಿ ಆಡುತ್ತಿದ್ದಾಗ ವೈಶಾಖ್ ವಿಜಯ್ ಕುಮಾರ್ ನಕಲ್ ಬಾಲ್ ಎಸೆಯುವ ಮೂಲಕ ವಿಕೆಟ್ ಪಡೆದುಕೊಂಡರು. ತಮ್ಮ ಕೊನೆಯ ಓವರ್ ನಲ್ಲಿ ಅಪಾಯಕಾರಿ ಆಲ್‌ರೌಂಡರ್ ಲಲಿತ್ ಯಾದವ್ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.

ಪದಾರ್ಪಣ ಪಂದ್ಯದಲ್ಲೇ ಅದ್ಭುತ ಪ್ರದರ್ಶನ
4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಪದಾರ್ಪಣಾ ಪಂದ್ಯದಲ್ಲೇ ಮಿಂಚು ಹರಿಸಿದರು. ಚಿನ್ನಸ್ವಾಮಿ ಅಂಗಳದಲ್ಲಿ ಆಡಿರುವ ಅನುಭವ ಹೊಂದಿರುವ ಅವರು, ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರು. ಈ ಮೂಲಕ ಮುಂದಿನ ದಿನಗಳಲ್ಲಿ ತಂಡದ ಪ್ರಮುಖ ಬೌಲರ್ ಆಗುವ ಭರವಸೆ ಮೂಡಿಸಿದ್ದಾರೆ.
ಬೌಲಿಂಗ್‌ನಲ್ಲಿ ಸಾಕಷ್ಟು ವೈವಿಧ್ಯತೆ ಹೊಂದಿರುವುದು ವಿಶೇಷ. ಅವರು ಸ್ಲೋ ಬಾಲ್ ಎಸೆಯುವುದಲ್ಲದೆ, ಕಟರ್ ಮತ್ತು ನಕಲ್ ಬಾಲ್ ಎಸೆಯುತ್ತಾರೆ. ತಮ್ಮ ವೇಗದಲ್ಲಿ ಸಾಕಷ್ಟು ವ್ಯತ್ಯಾಸ ಮಾಡುವ ಅವರು ಬ್ಯಾಟರ್ ಗಳನ್ನು ಕಾಡುತ್ತಾರೆ. ಎರಡು ವರ್ಷದಿಂದ ಆರ್ ಸಿಬಿ ತಂಡಕ್ಕೆ ನೆಟ್ ಬೌಲರ್ ಆಗಿದ್ದ ಅವರು, ಈ ಬಾರಿ ತಂಡವನ್ನು ಸೇರಿಕೊಂಡಿದ್ದಲ್ಲದೆ, ಆಡುವ ಅವಕಾಶವನ್ನು ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications