ಜುಲೈ 11 ಗುರುವಾರ, ಮುಂಬರುವ ಭಾರತ ವಿರುದ್ಧದ ಸರಣಿಗೂ ಮುನ್ನ ವನಿಂದು ಹಸರಂಗ ಅವರು ಶ್ರೀಲಂಕಾ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
2024ರ ಟಿ20 ವಿಶ್ವಕಪ್ ಟೂರ್ನಿ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ವೈಟ್ ಬಾಲ್ ಫಾರ್ಮ್ಯಾಟ್ ನಾಯಕನಾಗಿ ವನಿಂದು ಹಸರಂಗ ಅವರನ್ನು ಘೋಷಿಸಲಾಗಿತ್ತು. ಜುಲೈ 26, 27 ಮತ್ತು 29 ರಂದು ಪಲ್ಲೆಕೆಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಮೂರು ಟಿ20 ಪಂದ್ಯಗಳನ್ನು ಆಡುವ ಮೂಲಕ ಭಾರತವು ಸೀಮಿತ ಓವರ್‌ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದೆ.

ನಂತರ ಮೂರು ಏಕದಿನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ ವನಿಂದು ಹಸರಂಗ ಅವರು ಶ್ರೀಲಂಕಾ ತಂಡದ ಟಿ20 ನಾಯಕನ ಸ್ಥಾನವನ್ನು ತೊರೆದಿದ್ದಾರೆ. ಈ ಕುರಿತು
ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಬಿ) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2024ರಲ್ಲಿ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ನಂತರ ಈ ನಿರ್ಧಾರವನ್ನು ಹಸರಂಗ ತೆಗೆದುಕೊಂಡಿದ್ದಾರೆ. ಶ್ರೀಲಂಕಾ ಕ್ರಿಕೆಟ್‌ನ ಹಿತದೃಷ್ಟಿಯಿಂದ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯಲು ಮತ್ತು ಆಟಗಾರನಾಗಿ ತಂಡದಲ್ಲಿ ಉಳಿಯಲು ನಿರ್ಧರಿಸಿದ್ದೇನೆ ಎಂದು ಹಸರಂಗಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಸರಂಗಾ ಅವರು ಕೊನೆಯ ಬಾರಿಗೆ 2024ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಆದರೆ 2014ರ ಚಾಂಪಿಯನ್‌ಗಳು ಸೂಪರ್-8 ಸುತ್ತಿಗೆ ಆರ್ಹತೆ ಪಡೆಯುವಲ್ಲಿ ವಿಫಲವಾದರು.
ಹಸರಂಗ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಎಸ್‌ಎಲ್‌ಸಿ ತಿಳಿಸಿದೆ. ಅವರ ರಾಜೀನಾಮೆಯನ್ನು ಅಂಗೀಕರಿಸುವಾಗ, ಅಂತರಾಷ್ಟ್ರೀಯ ಕ್ರಿಕೆಟ್ ಯೋಜನೆಗಳಲ್ಲಿ ಹಸರಂಗ ನಮಗೆ ಪ್ರಮುಖ ಆಟಗಾರನಾಗಿ ಉಳಿಯುತ್ತಾರೆ ಎಂದು ಒತ್ತಿ ಹೇಳಿದೆ.
ವನಿಂದು ಹಸರಂಗ ಅವರಿಗೂ ಮುನ್ನ ದಸುನ್ ಶನಕ ಅವರು ಶ್ರೀಲಂಕಾದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಕಳಪೆ ಪ್ರದರ್ಶನದಿಂದಾಗಿ ಶನಕ ಕೂಡ ನಾಯಕನ ಸ್ಥಾನವನ್ನು ತೊರೆದಿದ್ದರು.
ನಂತರ ವನಿದು ಹಸರಂಗ ಅವರನ್ನು ನಾಯಕನಾಗಿ ಮಾಡಿದ್ದರು. ಅವರ ನಾಯಕತ್ವದಲ್ಲೂ ಶ್ರೀಲಂಕಾ ಅಸ್ಥಿರ ಪ್ರದರ್ಶನ ನೀಡಿದ್ದು, ಇದೀಗ ಇವರು ಕೂಡ ನಾಯಕತ್ವದಿಂದ ಕಳೆಗಿಳಿದಿದ್ದಾರೆ. ಹೀಗಿರುವಾಗ ತಂಡದ ನೂತನ ನಾಯಕ ಯಾರು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಸದ್ಯ ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಉಪನಾಯಕರಾಗಿದ್ದು, ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ. ಈ ಮೂಲಕ ಶ್ರೀಲಂಕಾ ತಂಡ ಹೊಸ ನಾಯಕನೊಂದಿಗೆ ಟೀಮ್ ಇಂಡಿಯಾ ವಿರುದ್ಧ ಕಣಕ್ಕೀಳಿಯಲಿದೆ.