ರಾಜಸ್ಥಾನ ರಾಯಲ್ಸ್ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ 6 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ. ಈ ಮೂಲಕ 2 ಅಂಕವನ್ನು ಕಲೆ ಹಾಕಿದೆ. ಅಲ್ಲದೆ ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾಗಿದೆ. ರಾಜಸ್ಥಾನ ಈ ಗೆಲುವಿನಲ್ಲಿ ಹಲವು ಆಟಗಾರರು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ನಿತೀಶ್ ರಾಣಾ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ವನಿಂದು ಹಸರಂಗ ಆರ್ಭಟಿಸಿದ್ದಾರೆ. ಈ ಮೂಲಕ ಆರ್ ಆರ್ ಮೊದಲ ಗೆಲುವು ದಾಖಲಿಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 182 ರನ್ ಕಲೆ ಹಾಕಿದೆ. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಸೇರಿಸಿದೆ. ಈ ಮೂಲಕ ಸಿಎಸ್‌ಕೆ 2 ಸೋಲು ಕಂಡಿದೆ. ಚೆನ್ನೈ ಬ್ಯಾಟರ್‌ಗಳಿಗೆ ಬಹುವಾಗಿ ಸ್ಪಿನ್ ಬೌಲರ್ ವನಿಂದು ಹಸರಂಗ ಕಾಟ ನೀಡಿದ್ದಾರೆ.

ಆರಂಭದಲ್ಲಿ ಜೋಫ್ರಾ ಆರ್ಚರ್ ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. ಪವರ್ ಪ್ಲೇ ಮುಗಿದ ಬಳಿಕ 8ನೇ ಓವರ್ ಬೌಲ್ ಮಾಡಲು ಬಂದ ಹಸರಂಗ ಅಬ್ಬರಿಸಿದರು. ತಾವು ಎಸೆದ ಮೊದಲ ಎಸೆತದಲ್ಲೇ ಆರಂಭಿಕ ರಾಹುಲ್ ತ್ರಿಪಾಠಿಗೆ ಖೆಡ್ಡಾ ತೋಡಿದ ಇವರು, ಚೆನ್ನೈಗೆ ಕಾಡಿದರು.
ಹಸಂರಗ ಬಿಗುವಿನ ದಾಳಿ ಎರಡನೇ ಓವರ್‌ನಲ್ಲೂ ಮುಂದುವರೆಯಿತು. ಮೊದಲ ಎರಡು ಎಸೆತದಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ನೀಡಿ ದುಬಾರಿ ಆಗಿದ್ದ ಹಸರಂಗ ಮೂರನೇ ಎಸೆತದಲ್ಲಿ ಶಿವಂ ದುಬೆಗೆ ಖೆಡ್ಡಾ ತೋಡಿದರು. ಮಿಡ್ ಆಫ್‌ನಲ್ಲಿ ಫೀಲ್ಡ್ ಮಾಡ್ತಾ ಇದ್ದ ರಿಯನ್ ಪರಾಗ್ ಕಮಾಲ್ ಕ್ಯಾಚ್ ಪಡೆದು, ಚೆನ್ನೈ ತಂಡದ ಗೆಲುವನ್ನು ಕೊಂಚ ದೂರ ಮಾಡಿದರು.
ಹಸರಂಗ ತಮ್ಮ ಮ್ಯಾಜಿಕ್ ಸ್ಪೆಲ್‌ನ್ನು 12ನೇ ಓವರ್‌ನಲ್ಲೂ ಮುಂದುವರೆಸಿದರು. ವಿಜಯ್ ಶಂಕರ್ ಇವರ ಎಸೆತದಲ್ಲಿ ರನ್‌ಗಳನ್ನು ಕಲೆ ಹಾಕುತ್ತಿದ್ದರು. ಆದರೆ ಓವರ್‌ನ ಕೊನೆಯ ಎಸೆತದಲ್ಲಿ ವಿಜಯ್ ಶಂಕರ್ ಬ್ಯಾಟ್ ಹಾಗೂ ಪ್ಯಾಡ್ ತಪ್ಪಿಸಿದ ಚೆಂಡು ನೇರವಾಗಿ ಹೋಗಿ ಸ್ಪಂಪ್ಸ್‌ಗೆ ಬಡಿಯಿತು.
ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳ್ತಾ ಇದ್ದರೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ, ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಲೇ ಬೇಕು ಎಂದು ಪಣ ತೊಟ್ಟಿದ್ದ ರುತುರಾಜ್ ಗಾಯಕ್ವಾಡ್ ಕೊನೆಯಲ್ಲಿ ಸಂಯಮ ಕಳೆದುಕೊಂಡರು. ಇವರು ಹಸರಂಗ ಓವರ್‌ನಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಯಶಸ್ವಿ ಜೈಸ್ವಾಲ್‌ಗೆ ಕ್ಯಾಚ್ ನೀಡಿದರು. ಹಸರಂಗ 4 ಓವರ್‌ಗಳಲ್ಲಿ 12 ಡಾಟ್ ಬೌಲ್ ಮಾಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಈ ವೇಳೆ ಇವರು 1 ಬೌಂಡರಿ, 4 ಸಿಕ್ಸರ್ ಸಹಾ ನೀಡಿದ್ರು.