ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಕ್ಕೆ ತುತ್ತಾಗಿರುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಇವರ ಬದಲಿಗೆ ದೆಹಲಿ ತಂಡದ ಯುವ ಆಟಗಾರ ಆಯುಷ್ ಬದೋನಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಿದೆ. ಆಯುಷ್ ಬದೋನಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ವಾಷಿಂಗ್ಟನ್ ಸುಂದರ್ ಅವರ ಎಡಭಾಗದ ಕೆಳ ಪಕ್ಕೆಲುಬಿಗೆ ಗಾಯವಾಗಿತ್ತು. ಬಳಿಕ ಅವರನ್ನು ಮೈದಾನದಿಂದ ಹೊರಗಡೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲಾಯಿತು. ಇವರ ಗಾಯದ ಬಗ್ಗೆ ತಿಳಿದುಕೊಳ್ಳಲು ಇವರನ್ನು ಸ್ಕ್ಯಾನಿಂಗ್‌ಗೆ ಒಳ ಪಡಿಸಲಾಗಿದೆ. ಇದರ ವರದಿ ಬಂದ ಬಳಿಕ ಬಿಸಿಸಿಐ ವೈದ್ಯರ ತಂಡ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

26 ವರ್ಷದ ವಾಷಿಂಗ್ಟನ್ ಸುಂದರ್ ಅವರು ಗಾಯದಿಂದ ಹೊರ ನಡೆಯುವ ಮುನ್ನ, 5 ಓವರ್ ಬೌಲಿಂಗ್ ನಡೆಸಿದ್ದರು. ಅಲ್ಲದೆ 27 ರನ್ ನೀಡಿದ್ದರು. ಇವರು ಮೈದಾನದಿಂದ ಹೊರ ನಡೆದ ಬಳಿಕ ಮತ್ತೆ ಫೀಲ್ಡ್ ಮಾಡಲು ಬರಲಿಲ್ಲ. ಆದರೆ ಅನಿವಾರ್ಯವಾಗಿ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕಾಯಿತು. ಓಡಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ತಂಡದ ಜಯದಲ್ಲಿ ಸುಂದರ್ ಬ್ಯಾಟ್ ಮಾಡಿ ಮಿಂಚಿದರು. ಇವರು ಮೊದಲ ಪಂದ್ಯದಲ್ಲಿ ಅಜೇಯ 7 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರ ಪರಿಣಾಮಕಾರಿ ಬ್ಯಾಟಿಂಗ್ ನೆರವಿನಿಂದ ಭಾರತ 49 ಓವರ್‌ಗಳಲ್ಲಿ 306 ರನ್ ಸೇರಿಸಿ ಜಯ ಸಾಧಿಸಿತು.
ವಾಷಿಂಗ್ಟನ್ ಸುಂದರ್ ಏಕದಿನ ಸರಣಿಯಿಂದ ಹೊರ ನಡೆದ ಬಳಿಕ ಇವರ ಸ್ಥಾನದಲ್ಲಿ ದೆಹಲಿ ತಂಡದ ಆಯೂಷ್ ಬದೋನಿ ಅವರಿಗೆ ಸೇರಿಸಿಕೊಳ್ಳಲಾಗಿದೆ. ಆಯುಷ್ ಭಾರತ ತಂಡವನ್ನು ರಾಜ್‌ಕೋಟ್‌ನಲ್ಲಿ ಸೇರಿಕೊಳ್ಳಲಿದ್ದಾರೆ. ವಾಷಿಂಗ್ಟನ್ ಸುಂದರ್ ಅವರು ಈ ಆವೃತ್ತಿಯಲ್ಲಿ ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರ ನಡೆದ ಮೂರನೇ ಆಟಗಾರನಾಗಿದ್ದಾರೆ. ಇದಕ್ಕೂ ಮೊದಲು ರಿಷಭ್ ಪಂತ್ ಏಕದಿನ ಸರಣಿಯಿಂದ ಹೊರ ನಡೆದಿದ್ದರು. ಅಲ್ಲದೆ ಟಿ20 ಸರಣಿಯಿಂದ ಭರವಸೆಯ ಆಟಗಾರ ತಿಲಕ್ ವರ್ಮಾ ಸಹ ಹೊರ ನಡೆದಿದ್ದಾರೆ.
ವಾಷಿಂಗ್ಟನ್ ಸುಂದರ್ ಅವರಿಗೆ ಓಡಲು ಸಾಧ್ಯವಾಗುತ್ತಿಲ್ಲ ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಕನ್ನಡಿಗ ಕೆಎಲ್ ರಾಹುಲ್ ಪಂದ್ಯದ ಬಳಿಕ ಹೇಳಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಅವರಿಗೆ ಗಾಯವಾಗಿದ್ದು ತಿಳಿದಿತ್ತು. ಆದರೆ ಆ ಗಾಯ ಎಷ್ಟು ಗಂಭೀರವಾಗಿದೆ ಎಂದು ನಾನು ಭಾವಿಸಿರಲಿಲ್ಲ. ಅವರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಹೀಗಾಗಿ ನಾವು ದೊಡ್ಡ ಅಪಾಯವನ್ನು ತೆಗೆದುಕೊಳ್ಳಲಿಲ್ಲ. ಅವರು ಸ್ಟ್ರೈಕ್ ರೋಟೇಟ್ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು ಎಂದು ರಾಹುಲ್ ತಿಳಿಸಿದ್ದಾರೆ.
ಆಯುಷ್ ಬದೋನಿ 21 ಪ್ರಥಮ ದರ್ಜೆ ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 1681 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 7 ಅರ್ಧಶತಕಗಳು ಸೇರಿವೆ. ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಆಡಿದ 27 ಪಂದ್ಯಗಳಲ್ಲಿ 693 ರನ್ ಬಾರಿಸಿದ್ದಾರೆ.
ಬದಲಾದ ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಶ್‌ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್) ಮತ್ತು ಆಯುಷ್ ಬದೋನಿ.