ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಟಿ20 ಮಾದರಿಯ ಭವಿಷ್ಯದ ಬಗ್ಗೆ ಸಾಕಷ್ಟು ವರದಿಗಳು ಹರಿದಾಡುತ್ತಿದೆ. ಈ ಇಬ್ಬರು ಕೂಡ ಇನ್ನು ಮುಂದೆ ಚುಟುಕು ಮಾದರಿಯಲ್ಲಿ ಆಡುವುದಿಲ್ಲ ಎನ್ನಲಾಗುತ್ತಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಸ್ವತಃ ಬಿಸಿಸಿಐಗೆ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದು ಕೂಡ ವರದಿಯಾಗಿದೆ.
ಆದರೆ ಈ ಸಂದರ್ಭದಲ್ಲಿ ಕೆಲ ಮಾಜಿ ಕ್ರಿಕೆಟಿಗರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಚುಟುಕು ಮಾದರಿಯ ಭವಿಷ್ಯದ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಬಗ್ಗೆ ಪ್ರತಿಕ್ರಿಯಿಸಿ ಕೊಹ್ಲಿ ಹಾಗೂ ರೋಹಿತ್ ಇಬ್ಬರು ಕೂಡ ಚುಟುಕು ಮಾದರಿಯಲ್ಲಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್‌ನ ದಿಗ್ಗಜ ಆಟಗಾರ ವಾಸಿಂ ಅಕ್ರಮ್ ಕೂಡ ಅದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2022ರ ನವೆಂಬರ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಿಂದ ನಿರ್ಗಮಿಸಿತ್ತು. ಅದಾದ ಬಳಿಕ ಇಬ್ಬರು ಅನುಭವಿ ಆಟಗಾರರು ಕೂಡ ಚುಟುಕು ಮಾದರಿಯಲ್ಲಿ ಕಣಕ್ಕಿಳಿದೇ ಇಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಸ್ಪೋರ್ಟ್ಸ್ ಕೀಡಾಗೆ ನೀಡಿದ ಸಂದರ್ಶನದಲ್ಲಿ ವಾಸಿಂ ಅಕ್ರಮ್ ಪ್ರತಿಕ್ರಿಯೆ ನೀಡಿದ್ದಾರೆ. "ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳುಗಳು ಮಾತ್ರವೇ ಬಾಕಿಯಿದೆ. ಆ ಟೂರ್ನಿಗೆ ನಾನು ಇಬ್ಬರನ್ನು ಕೂಡ ಆಯ್ಕೆ ಮಾಡುತ್ತೇನೆ.ಅವರಿಬ್ಬರು ಕೂಡ ಭಾರತದ ಶ್ರೇಷ್ಠ ಆಟಗಾರರು ಎನ್ನುವುದರಲ್ಲಿ ಅನುಮಾನವಿಲ್ಲ. ಟಿ20ಯಲ್ಲಿ ನಿಮಗೆ ಸ್ವಲ್ಪ ಅನುಭವವೂ ಬೇಕಾಗುತ್ತದೆ. ನೇರವಾಗಿ ಯುವ ಆಟಗಾರರನ್ನು ಮಾತ್ರವೇ ಬಿಡಲು ಸಾಧ್ಯವಿಲ್ಲ" ಎಂದಿದ್ದಾರೆ ವಾಸಿಂ ಅಕ್ರಮ್.
ರೋಹಿತ್ ಶರ್ಮಾ 148 ಪಂದ್ಯಗಳಲ್ಲಿ 3853 ರನ್‌ಗಳನ್ನು ಗಳಿಸಿದ್ದು ನಾಲ್ಕು ಶತಕ ಮತ್ತು 29 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 115 ಪಂದ್ಯಗಳಲ್ಲಿ 4008 ರನ್ ಗಳಿಸಿದ್ದಾರೆ. ಈ ಪೈಕಿ ಒಂದು ಶತಕ ಮತ್ತು 37 ಅರ್ಧಶತಕಗಳನ್ನು ಸಿಡಿಸಿ ಚುಟುಕು ಮಾದರಿಯ ಅತ್ಯಂತ ಯಶಸ್ವಿ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನ ಅತ್ಯಂತ ಅನುಭವಿ ಆಟಗಾರ ಎನಿಸಿಕೊಂಡಿದ್ದಾರೆ. 148 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡಿದ್ದರೆ ಅವರ ಬಳಿಕದ ಸ್ಥಾನದಲ್ಲಿ ವಿರಾಟ್ ಕೊಹ್ಲಿಯಿದ್ದಾರೆ. ಇನ್ನು ಈವರೆಗೆ ನಡೆದಿರುವ ಎಲ್ಲಾ 8 ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ರೋಹಿತ್ ಶರ್ಮಾ ಆಡಿದ್ದಾರೆ ಎನ್ನುವುದು ಗಮನಾರ್ಹ ಅಂಶ. 2007ರಲ್ಲಿ ಭಾರತ ವಿಶ್ವಕಪ್ ಟೂರ್ನಿಯನ್ನು ಗೆದ್ದಾಗಲೂ ರೋಹಿತ್ ಶರ್ಮಾ ಆ ತಂಡದ ಭಾಹವಾಗಿದ್ದರು.