ಜುಲೈ 13 ಶನಿವಾರ, ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ ಮುನ್ನ ಭಾರತದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡದ ಮಾರ್ಗದರ್ಶಕರಾಗಿದ್ದಾರೆ.
20 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಗೋಸ್ವಾಮಿ 2022ರಲ್ಲಿ ನಿವೃತ್ತರಾಗುವ ಮೊದಲು ಭಾರತಕ್ಕಾಗಿ ಎಲ್ಲಾ ಸ್ವರೂಪಗಳಲ್ಲಿ 355 ವಿಕೆಟ್‌ಗಳನ್ನು ಪಡೆದಿದ್ದರು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಇದೀಗ 2021ರಲ್ಲಿ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಋತುವಿನಲ್ಲಿ ಫೈನಲ್‌ಗೆ ಮುನ್ನಡೆಸಿದ ಸ್ಟಾರ್ ಆಲ್-ರೌಂಡರ್ ಡಿಯಾಂಡ್ರಾ ಡಾಟಿನ್ ನೇತೃತ್ವದ ಟಿಕೆಆರ್ ತಂಡಕ್ಕೆ ಗೋಸ್ವಾಮಿ ಮಾರ್ಗದರ್ಶಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ಮಾತನಾಡಿರುವ ಜೂಲನ್ ಅವರು, 'ಇಂತಹ ಅದ್ಭುತ ತಂಡದೊಂದಿಗೆ ಸಂಬಂಧ ಹೊಂದಲು ಹೆಮ್ಮೆಯ ವಿಷಯವಾಗಿದೆ. ನೈಟ್ ರೈಡರ್ಸ್ ಉತ್ತಮ ಪ್ರದರ್ಶನ ನೀಡಿದ್ದು, ಟಿಕೆಆರ್ ಮಹಿಳಾ ತಂಡಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಇದಕ್ಕಾಗಿ ಕೆಕೆಆರ್ ಆಡಳಿತಕ್ಕೆ ಧನ್ಯವಾದಗಳು ಎಂದಿದ್ದಾರೆ.
ಟಿಕೆಆರ್ ತಂಡದಲ್ಲಿ ಜೆಮಿಮಾ ರಾಡ್ರಿಗಸ್, ಮೆಗ್ ಲ್ಯಾನಿಂಗ್, ಜೆಸ್ ಜೊನಾಸೆನ್ ಮತ್ತು ಶಿಖಾ ಪಾಂಡೆ ಅವರಂತಹ ಸ್ಟಾರ್ ಆಟಗಾರರಿದ್ದಾರೆ. 2024ರ ಮಹಿಳೆಯರ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 21 ರಿಂದ ಆಗಸ್ಟ್ 29 ರವರೆಗೆ ನಡೆಯಲಿದ್ದು, ಟಿಕೆಆರ್ ಆಗಸ್ಟ್ 22 ರಿಂದ 27 ರವರೆಗೆ ನಾಲ್ಕು ಲೀಗ್ ಪಂದ್ಯಗಳನ್ನು ಆಡಲಿದೆ. ಫೈನಲ್ ಪಂದ್ಯ ಆಗಸ್ಟ್ 29 ರಂದು ತರೋಬಾದಲ್ಲಿ ನಡೆಯಲಿದೆ.
ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ಜೂಲನ್ ಗೋಸ್ವಾಮಿ ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2002ರಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೂಲನ್ ಅವರು 2022 ರವರೆಗೆ ಭಾರತಕ್ಕೆ ಕೊಡುಗೆ ನೀಡುವುದನ್ನು ಮುಂದುವರೆಸಿದ್ದರು.
ಅವರ ಸುದೀರ್ಘ ಪಯಣದಲ್ಲಿ ಏಕಾಂಗಿಯಾಗಿ ಭಾರತ ಹಲವು ಪಂದ್ಯಗಳನ್ನು ಗೆಲ್ಲುವಂತೆ ಮಾಡಿದರು. ಜೂಲನ್ ಟೆಸ್ಟ್ ಮಾದರಿಯಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದು, ಏಕದಿನ ಮಾದರಿಯಲ್ಲಿ 255 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 56 ವಿಕೆಟ್‌ಗಳನ್ನು ಕೂಡ ಉರುಳಿಸಿದ್ದಾರೆ.
2024ರ ಮಹಿಳೆಯರ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 21 ರಿಂದ ಆರಂಭವಾಗಲಿದೆ. ಟೂರ್ನಿಯಲ್ಲಿ ಮೂರು ತಂಡಗಳು ಭಾಗವಹಿಸುತ್ತಿವೆ. ಟ್ರಿನ್‌ಬಾಗೊ ನೈಟ್ ರೈಡರ್ಸ್, ಹಾಲಿ ಚಾಂಪಿಯನ್ ಬಾರ್ಬಡೋಸ್ ರಾಯಲ್ಸ್ ಮತ್ತು ಗಯಾನಾ ಅಮೆಜಾನ್ ವಾರಿಯರ್ಸ್.
ಈ ಟೂರ್ನಿಯಲ್ಲಿ ಒಟ್ಟು ಏಳು ಪಂದ್ಯಗಳು ನಡೆಯಲಿದ್ದು, ಇವೆಲ್ಲವೂ ತರೋಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿದೆ. ಇದು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್ ಆಗಿದೆ.
2022ರಲ್ಲಿ ನಡೆದ ಮೊದಲ ಸೀಸನ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿತ್ತು. ಬಾರ್ಬಡೋಸ್ ರಾಯಲ್ಸ್ 2023ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.