ಸೆಮಿಫೈನಲ್ ಗೆದ್ದ ಬಳಿಕ ಕಿವೀಸ್ ನಾಯಕ ವಿಲಿಯಮ್ಸನ್ ಹೇಳಿದ್ದಿದು

ಮ್ಯಾಂಚೆಸ್ಟರ್, ಜುಲೈ 10: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಪ್ರದರ್ಶನ ನೀಡಬಲ್ಲ ತಂಡವೆಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿದಿದ್ದ ನ್ಯೂಜಿಲೆಂಡ್ ತಂಡ ಕೊನೆಗೂ ತನ್ನ ಭರ್ಜರಿ ಪ್ರದರ್ಶನ ಹೊರಹಾಕಿದ್ದು, ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್ ಟೀಮ್ ಇಂಡಿಯಾಗೆ ಸೋಲುಣಿಸಿ ಸತತ ಎರಡನೇ ಬಾರಿ ವಿಶ್ವಕಪ್ ಫೈನಲ್ ತಲುಪಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್ (67) ಮತ್ತು ರಾಸ್ ಟೇಲರ್ (74) ಅವರ ಭರ್ಜರಿ ಪ್ರದರ್ಶನದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 239 ರನ್‌ಗಳನ್ನು ದಾಖಲಿಸಿತು.
ಗುರಿ ಬೆನ್ನತ್ತಿದ ಭಾರತ ತಂಡ 24 ರನ್ ಗಳಿಸುವ ಹೊತ್ತಿಗಾಗಲೇ ಅಗ್ರ ಕ್ರಮಾಂಕದ 4 ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ರವೀಂದ್ರ ಜಡೇಜಾ (77) ಮತ್ತು ಎಂ.ಎಸ್ ಧೋನಿ (50) ಅವರ ಕೆಚ್ಚೆದೆಯ ಹೋರಾಟದ ನೆರವಿನಿಂದ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆದರೆ, ಇನಿಂಗ್ಸ್ ಅಂತ್ಯದಲ್ಲಿ ವಿಕೆಟ್ ಕೈಚೆಲ್ಲಿ 221 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ 18 ರನ್‌ಗಳ ಅಂತರದಲ್ಲಿ ಸೋಲಿನ ಆಘಾತಕ್ಕೊಳಗಾಗಿತು.
ಬ್ಯಾಟಿಂಗ್‌ಗೆ ಉತ್ತಮವಾಗಿದ್ದ ಪಿಚ್‌ನಲ್ಲಿ ನ್ಯೂಜಿಲೆಂಡ್ ಗಳಿಸಿದ ಸಾಧಾರಣ ಮೊತ್ತವನ್ನು ಭಾರತ ತಂಡ ಸುಲಭವಾಗಿ ಮೆಟ್ಟಿನಿಲ್ಲುತ್ತದೆ ಎಂದೇ ಎಣಿಸಲಾಗಿತ್ತು. ಆದರೆ, ಕಿವೀಸ್ ಪಡೆಯ ಶಿಸ್ತಿನ ಬೌಲಿಂಗ್ ಎದುರು ಭಾರತ ನಿರುತ್ತರವಾಯಿತು.
ಪಂದ್ಯದ ಬಳಿಕ ಮಾತನಾಡಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, "ಎರಡು ದಿನ ಆಡಿದ ಸೆಮಿಫೈನಲ್ ಪಂದ್ಯ ಅದ್ಭುತವಾಗಿತ್ತು. ಈ ಪಂದ್ಯದಲ್ಲಿ ಗೆದ್ದ ತಂಡವಾಗಿರುವುದಕ್ಕೆ ಮತ್ತಷ್ಟು ಸಂತಸವಿದೆ. ಪರಿಸ್ಥಿತಿಗಳಿಗೆ ಹೊಂದುಕೊಂಡು ಆಡಬೇಕಾಗಿದ್ದ ಕಾರಣ ಬಹಳ ಕಠಿಣವಾಗಿತ್ತು. ಎರಡೂ ತಂಡಗಳು ಈ ಪಂದ್ಯ ಹೈ ಸ್ಕೋರಿಂಗ್ ಪಂದ್ಯವಾಗಲಿದೆ ಎಂದೇ ಲೆಕ್ಕಾಚಾರ ಮಾಡಿದ್ದವು. ಆದರೆ 240 ರನ್‌ಗಳನ್ನು ಗಳಿಸಿದರೂ ಭಾರತ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಿದೆ ಎಂಬುದನ್ನು ನಮ್ಮ ತಂಡ ನಂಬಿತ್ತು,'' ಎಂದು ಹೇಳಿದರು.
ಇದೇ ವೇಳೆ ಜಡೇಜಾ ಮತ್ತು ಧೋನಿ ನಡುವಣ ಜೊತೆಯಾಟದ ಕುರಿತಾಗಿಯೂ ಮಾತನಾಡಿದ ವಿಲಿಯಮ್ಸನ್, "ಪ್ರತಿಯೊಬ್ಬರ ಕೊಡುಗೆಯೂ ಇಲ್ಲಿದೆ. ನಮ್ಮ ಗುರಿಯೇನಿದ್ದರೂ ಉತ್ತಮ ಲೈನ್ ಮತ್ತು ಲೆನ್ತ್‌ನಲ್ಲಿ ಬೌಲಿಂಗ್ ಮಾಡುವುದಾಗಿತ್ತು. ಆರಂಭಿಕ ವಿಕೆಟ್ ಪಡೆದು ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚಿಸುವುದನ್ನು ಎದುರು ನೋಡುತ್ತಿದ್ದೆವು. ಅಂತೆಯೇ ಮಾಡಿದೆವು ಕೂಡ. ಆದರೆ ನಂತರ ಬಂದ ಜಡೇಜಾ ಮತ್ತು ಧೋನಿ ಅದ್ಭುತವಾಗಿ ಆಡುತ್ತಿದ್ದರು. ಒಂದು ಹಂತದಲ್ಲಿ ಪಂದ್ಯವನ್ನು ಗೆಲ್ಲುವ ಕಡೆಗೆ ಕೊಂಡೊಯ್ದಿದ್ದರು. ಆದರೆ, ನಮ್ಮ ಕ್ಷೇತ್ರ ರಕ್ಷಣೆ ಅದ್ಭುತವಾಗಿದ್ದ ಕಾರಣ ಫಲಿತಾಂಶ ಬದಲಾಯಿತು,'' ಎಂದು ಪಂದ್ಯದ ರೋಚಕ ಘಟ್ಟದ ಕುರಿತಾಗಿ ಹೇಳಿದರು.
2015ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಫೈನಲ್ ತಲುಪಿದ್ದ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್‌ಗಳ ಹೀನಾಯ ಸೋಲುಂಡು ರನ್ನರ್ಸ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications